ಗೃಹ ಸಚಿವ ಪರಮೇಶ್ವರ್ ಕೊಠಡಿಯಲ್ಲಿ ಸಚಿವರ ರಹಸ್ಯ ಸಭೆ: 'ಕೈ' ಪಾಳಯದಲ್ಲಿ ಭಾರೀ ಸಂಚಲನ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಕೊಠಡಿಯಲ್ಲಿ ನಾಲ್ವರು ಸಚಿವರು ರಹಸ್ಯ ಸಭೆ ನಡೆಸಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಸಚಿವ ಪರಮೇಶ್ವರ್ ಕೊಠಡಿಯಲ್ಲಿ ನಡೆದ ಸಭೆ.
ಸಚಿವ ಪರಮೇಶ್ವರ್ ಕೊಠಡಿಯಲ್ಲಿ ನಡೆದ ಸಭೆ.
Updated on

ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಗದ್ದುಗೆ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವರ ಲಾಭಿ ಜೋರಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಕೊಠಡಿಯಲ್ಲಿ ನಾಲ್ವರು ಸಚಿವರು ರಹಸ್ಯ ಸಭೆ ನಡೆಸಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಪರಮೇಶ್ವರ ಅವರ ಕಚೇರಿಯಲ್ಲಿ ವಾಲ್ಮೀಕಿ ಸಮುದಾಯದ ಧಾರ್ಮಿಕ ಮುಖ್ಯಸ್ಥ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಪರಮೇಶ್ವರ್, ಹೆಚ್​.ಸಿ.ಮಹದೇವಪ್ಪ,‌ ಸತೀಶ್ ಜಾರಕಿಹೊಳಿ​​, ಕೆ.ಎನ್.ರಾಜಣ್ಣ ಅವರು ರಾಜಕೀಯ ಬೆಳವಣಿಗೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಶುಕ್ರವಾರ ಪರಮೇಶ್ವರ ಅವರು ಸಚಿವರೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಜಾತ್ರೆಗೆ ಆಹ್ವಾನಿಸಲು ವಿಧಾನಸೌಧದ ನನ್ನ ಕಾರ್ಯಾಲಯಕ್ಕೆ ಬಂದಿದ್ದರು. ಇದನ್ನು ಅರಿತು ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿಯವರು ಅಲ್ಲಿಗೆ ಬಂದರು. ಅವರು ಸ್ವಾಮೀಜಿಯವರ ಆಶೀರ್ವಾದ ಪಡೆದು ಹೋದರು. ಇದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಾರದು ಎಂದು ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿಯವರು ಮಾತನಾಡಿ, ನಾಲ್ವರು ಸಚಿವರು ಒಂದು ಕಡೆ ಸೇರುವುದು ಬೇಡವೇ ಎಂದು ಸಿಡಿಮಿಡಿಗೊಂಡರು.

ಸಚಿವ ಪರಮೇಶ್ವರ್ ಕೊಠಡಿಯಲ್ಲಿ ನಡೆದ ಸಭೆ.
ಹೈಕಮಾಂಡ್ ಆದೇಶಕ್ಕೆ ಸಿದ್ದು ಬಣ ಗಪ್-ಚುಪ್: ಕಾಂಗ್ರೆಸ್ ನಲ್ಲಿ ತಹಬಂದಿಗೆ ಬಂದ ಭಿನ್ನರಾಗ; ಡಿಕೆಶಿ CM ಕನಸಿಗೆ ಮತ್ತಷ್ಟು 'ಓಘ'!

ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಕಚೇರಿಯಲ್ಲಿ ಶಾಸಕರಾದ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಮತ್ತು ತಾವು ಭೇಟಿಯಾಗಿರುವುದಕ್ಕೆ ನಾನಾ ರೀತಿಯ ವ್ಯಾಖ್ಯಾನಗಳನ್ನು ಮಾಡಲಾಗುತ್ತಿದೆ. ಅಲ್ಲಿ ವಾಲೀಕಿ ಪೀಠದ ಶ್ರೀಗಳು ಇದ್ದಿದ್ದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಶ್ರೀಗಳು ಬರುವುದು ರಾಜಕೀಯ ಮಾಡಲಿಕ್ಕಾ?…. ರಾಜನಹಳ್ಳಿ ಜಾತ್ರೆಗೆ ಕರೆಯಲಿಕ್ಕೆ ಬಂದಿದ್ದರು. ಆ ವೇಳೆ ನಾವು, ಸಚಿವರು ಸೇರಿದ್ದೆವು. ಅದನ್ನು ಪ್ರಶ್ನೆ ಮಾಡಿದರೆ ಹೇಗೆ? ಎಂದು ಕಿಡಿಕಾರಿದರು.

ಮೂಲಗಳ ಪ್ರಕಾರ, ಫೆಬ್ರವರಿ 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ನಡೆಯಲಿರುವ ರಾಜನಹಳ್ಳಿ ಮಠದ ವಾರ್ಷಿಕ ಜಾತ್ರೆಯಲ್ಲಿ ಎಸ್‌ಟಿ ಸಮುದಾಯದ ಜನರನ್ನು ಹೆಚ್ಚಾಗಿ ಸೇರಿಸಿ, ಶಕ್ತಿ ಪ್ರದರ್ಶಿಸಲು ಜಾರಕಿಹೊಳಿ ಅವರು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ನಡುವ ಸತತ ಚುನಾವಣೆಗಳಲ್ಲಿ ಸೋಲು ಕಂಡು, ಅಸಮಾಧಾನಗೊಂಡಿರುವ ಬಿಜೆಪಿ ಮಾಜಿ ಸಚಿವ ಶ್ರೀ ರಾಮುಲು ಅವರು, ಎಸ್‌ಸಿ/ಎಸ್‌ಟಿ ಶಾಸಕರಿಗೆ ಪ್ರತ್ಯೇಕ ಸಭೆ ನಡೆಸದಂತೆ ಸೂಚನೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ವಿಶೇಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಅಸಮಾಧಾನಗೊಂಡಿರುವ ಸಚಿವ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಲ್ಲಿ ಬದಲಾವಣೆಯಾದರೆ, ಹೈಕಮಾಂಡ್ ಪರಮೇಶ್ವರ ಅಥವಾ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದರೆ ಒಗ್ಗಟ್ಟು ಮುಂದುವರೆಯಲಿದೆ. ಒಂದು ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು ಮುನ್ನೆಲೆಗೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಸ್ವಲ್ಪ ಕಾಲ ಆ ಹುದ್ದೆಯಲ್ಲಿ ಮುಂದುವರಿಯಲು ಬೆಂಬಲ ನೀಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com