ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜಟಾಪಟಿ: ವಿಜಯೇಂದ್ರ ವಿರುದ್ಧ ಅಭ್ಯರ್ಥಿ ಘೋಷಿಸಲು ಯತ್ನಾಳ್ ಬಣ ಸಜ್ಜು

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ ಯತ್ನಾಳ್ ಅಥವಾ ಕುಮಾರ್ ಬಂಗಾರಪ್ಪ ವಿಜಯೇಂದ್ರ ವಿರುದ್ಧ ಸ್ಪರ್ಧೆಗಿಳಿಯಬಹುದು ಎಂದು ಮೂಲಗಳು ತಿಳಿಸಿವೆ.
BJP MLA Yatnal
ಬಸನಗೌಡ ಪಾಟೀಲ್ ಯತ್ನಾಳ್
Updated on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ತೊಡೆ ತಟ್ಟಿರುವ ಬಂಡಾ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಫೈನಲ್ ಮಾಡಿದ್ದು, ಘೋಷಣೆಗೆ ಸಜ್ಜಾಗಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶಾಸಕರಾದ ಬಿ.ಪಿ.ಹರೀಶ್, ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತಿತರರು ಸಭೆ ಸೇರಿದ್ದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಬಿಜೆಪಿಯ ಭಿನ್ನಮತೀಯರು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಮ್ಮತದ ತೀರ್ಮಾನವನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ವಿಜಯೇಂದ್ರ ವಿರುದ್ದ ತಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲೇಬೇಕು. ಅಭ್ಯರ್ಥಿ ಯಾರಗಲಿದ್ದಾರೆ ಎಂಬುದನ್ನು ದೆಹಲಿಯಲ್ಲಿ ಮತ್ತೊಂದು ಸಭೆ ಸೇರಿ ಪ್ರಕಟಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ ಯತ್ನಾಳ್ ಅಥವಾ ಕುಮಾರ್ ಬಂಗಾರಪ್ಪ ವಿಜಯೇಂದ್ರ ವಿರುದ್ಧ ಸ್ಪರ್ಧೆಗಿಳಿಯಬಹುದು ಎಂದು ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಸೇರಿದಂತೆ ಜಿಲ್ಲಾಧ್ಯಕ್ಷರ ನೇಮಕಾತಿಯಲ್ಲಿ ಬಿ ವೈ ವಿಜಯೇಂದ್ರ ಅವರ ಏಕಪಕ್ಷೀಯ ನಿರ್ಧಾರದಿಂದ ಅಸಮಾಧಾನಗೊಂಡ ತಟಸ್ಥ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆಂದು ವರದಿಗಳು ತಿಳಿಸಿವೆ.

BJP MLA Yatnal
ಜಿಲ್ಲಾಧ್ಯಕ್ಷರ ನೇಮಕಾತಿ ಸರಿಯಾಗಿ ನಡೆದಿಲ್ಲ, ಈ ಬಗ್ಗೆ ನಡ್ಡಾಗೆ ಪತ್ರ: ವಿಜಯೇಂದ್ರ ವಿರುದ್ಧ ಯತ್ನಾಳ್ ಗುಡುಗು

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, ನಮ್ಮ ಬಣದಿಂದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವುದು ಖಚಿತ. ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮುಖ್ಯವಲ್ಲ. ನಮಗೆ ಎಷ್ಟು ಮತ ಬರುತ್ತವೆ ಎಂಬುದು ಕೂಡ ಮುಖ್ಯ. ಆದರೆ, ಚುನಾವಣೆ ನಡೆಯುವುದು ಖಚಿತ ಎಂದು ಹೇಳಿದರು.

ಪಕ್ಷದಲ್ಲಿ ಕೆಲವರು ಏಕಪಕ್ಷೀಯ ಧೋರಣೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕಾತಿ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ವಿಜಯೇಂದ್ರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಮೊದಲು ಹೋಗಬೇಕು. ಮತ್ತೆರಡು ದಿನದಲ್ಲಿ ನಾವು ದೆಹಲಿಯಲ್ಲಿ ಸಭೆ ಸೇರಲು ತೀರ್ಮಾನಿಸಿದ್ದೇವೆ. ಇಲ್ಲಿನ ಬೆಳವಣಿಗೆಗಳ ಕುರಿತಂತೆ ವರಿಷ್ಠರ ಗಮನಕ್ಕೆ ತರುತ್ತೇವೆ. ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಅವರು ಬದಲಾವಣೆಯಾಗಬೇಕೆಂಬ ನಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮಲ್ಲಿ ವಿಜಯೇಂದ್ರ ವಿರುದ್ದ ಸ್ಪರ್ಧೆ ಮಾಡಲು ಹಲವರು ಸಜ್ಜಾಗಿದ್ದಾರೆ. ನನ್ನನ್ನು ಸೇರಿದಂತೆ ಯಾರು ಬೇಕಾದರೂ ಆಗಬಹುದು. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಉಳಿಯಬೇಕಾದರೆ ಕೆಲವು ಸಂದರ್ಭದಲ್ಲಿ ನಾವು ತ್ಯಾಗ ಮಾಡಬೇಕಾಗುತ್ತದೆ. ಕುಟುಂಬ ರಾಜಕಾರಣದಲ್ಲಿ ನಮ ಪಕ್ಷದಲ್ಲಿ ಇರಬಾರದು. ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇಲ್ಲ ಎನ್ನುವ ಕಾಲ ಬದಲಾಗಿದೆ. ಕೆಲವರು ಯಡಿಯೂರಪ್ಪ ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯುವುದೇ ಇಲ್ಲ ಎಂದು ಹೇಳುತ್ತಾರೆ. ಯಡಿಯೂರಪ್ಪ, ನಾನೂ ಸೇರಿದಂತೆ ಯಾರೇ ಇದ್ದರೂ ಬಿಟ್ಟರೂ ಬಿಜೆಪಿ ಉಳಿಯುತ್ತದೆ. ಏಕೆಂದರೆ ಇದು ಕಾರ್ಯಕರ್ತರ ಪಕ್ಷ. ಬರುವವರು ಬರುತ್ತಾರೆ. ಹೋಗುವವರು ಹೋಗುತ್ತಾರೆ. ಏಕ ವ್ಯಕ್ತಿಯಿಂದ ಪಕ್ಷ ಉಳಿಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ನಾವು ವರಿಷ್ಠರ ಗಮನಕ್ಕೆ ತರುತ್ತೇವೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡುತ್ತೇವೆ. ಬಿಜೆಪಿ ಸ್ವಚ್ಛವಾಗಬೇಕು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಖಚಿತ. ಅಲ್ಲಿಯ ತನಕ ಕೆಲವರು ಸಮಾಧಾನದಿಂದ ಕಾಯಬೇಕೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com