Budget 2025: ಅಭಿವೃದ್ಧಿ ಆಧಾರಿತ, ಸಮತೋಲಿತ ಬಜೆಟ್ ಎಂದ BJP

ಆತ್ಮನಿರ್ಭರ ಮಾಡುವ ಪ್ರಧಾನಿ ಮೋದಿಯವರ ಕನಸಿಗೆ ಪೂರಕವಾದ ಬಜೆಟ್ ಆಗಿದೆ. ಮಧ್ಯಮವರ್ಗದ ಜನರ ನಿರೀಕ್ಷೆಗಳಿಗೆ ಬೂಸ್ಟ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ ಕೇಂದ್ರ ಬಜೆಟ್ –2025 ಅನ್ನು ಕರ್ನಾಟಕ ಬಿಜೆಪಿ ಶ್ಲಾಘಿಸಿದ್ದು, ಇದು ಅಭಿವೃದ್ಧಿ ಆಧಾರಿತ ಹಾಗೂ ಸಮತೋಲಿದ ಬಜೆಟ್ ಎಂದು ಬಣ್ಣಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿ, ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸರಪ್ರೈಸ್ ಗಿಫ್ಟ್ ಕೊಟ್ಟಿದ್ದು, ಇದರಿಂದ ಮಧ್ಯಮ ವರ್ಗದವರ ಉಳಿತಾಯ ಹೆಚ್ಚಲಿದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

ಇದೊಂದು ದೂರದೃಷ್ಟಿಯ ವಿಕಸಿತ ಭಾರತ 2047 ರ ಅಡಿಗೆ ತೆಗೆದುಕೊಂಡು ಹೋಗುವ ಅಭಿವೃದ್ಧಿ ಪರವಾಗಿರುವ ಬಜೆಟ್. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಸಮತೋಲನ ತೆಗೆದುಕೊಂಡು ಹೋಗುವ ಬಜೆಟ್. ಆತ್ಮನಿರ್ಭರ ಮಾಡುವ ಪ್ರಧಾನಿ ಮೋದಿಯವರ ಕನಸಿಗೆ ಪೂರಕವಾದ ಬಜೆಟ್ ಆಗಿದೆ. ಮಧ್ಯಮವರ್ಗದ ಜನರ ನಿರೀಕ್ಷೆಗಳಿಗೆ ಬೂಸ್ಟ್ ನೀಡಿದೆ. ಮದ್ಯಮ ವರ್ಗದ ಉಳಿತಾಯ ಹೆಚ್ಚಿಸಿದೆ. ಇದೊಂದು ಮಧ್ಯಮ ವರ್ಗದವರಿಗೆ ಸರ್ಪ ರೈಸ್ ಗಿಫ್ಟ್‌. ಎಲ್ಲರೂ 10 ಲಕ್ಷ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ, ಪಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿ ಸರ್ಪರೈಸ್ ಗಿಫ್ಟ್ ನೀಡಿದ್ದಾರೆ.

ಅಭಿವೃದ್ಧಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಬಡವರು. ರೈತರು, ಮಹಿಳೆಯರು, ಯುವಕರು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಪುಲವಾದಂತ ಅವಕಾಶ ಕೊಟ್ಟಿರುವ ಬಜೆಟ್. ತನ್ನದೇ ತಾಂತ್ರಿಕತೆಗೆ ಸಂಶೋಧನೆಗೆ ವಿಶೇಷವಾಗಿ ಕೃಷಿಯನ್ನು ಆತ್ಮ ನಿರ್ಭರ ಮಾಡುವ ಬಜೆಟ್. ಯೂರಿಯಾ ಗೊಬ್ಬರ, ಬೀಜ, ಉತ್ಪಾದನೆಯಲ್ಲಿ ನಾವು ಸಂಪೂರ್ಣವಾಗಿ ಆತ್ಮನಿರ್ಭರವಾಗಲು ಅವಕಾಶ ನೀಡಲಾಗಿದೆ. ಹಳ್ಳಿಗಾಡಿನಲ್ಲಿ ಸ್ವಯಂ ಉದ್ಯೋಗವಕಾಶ, ಹಳ್ಳಿಗಳಿಂದ ಶಹರಕ್ಕೆ ಹೋಗುವುದನ್ನು ತಡೆಯಲಯ ಕ್ರಮ. ರೈಲ್ವೆ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ ಕ್ಯಾನ್ಸ‌ರ್ ನಿಯಂತಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ,

ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7ರಿಂದ 8 ಸಾವಿರ ಕೋಟಿ ರೂ. ಸಾಲ ದೊರೆಯುವ ಸಾಧ್ಯತೆ ಇದೆ. ಅಭಿವೃದ್ಧಿ ಪರ ಬಜೆಟ್, ಆದ್ದರಿಂದ 2025-26 ರ ಹೊತ್ತಿಗೆ ಶೇ 7 ರಿಂದ 8 ರ ವರೆಗೆ ಜಿಡಿಪಿ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ತೆರಿಗೆಯಲ್ಲಿ ಬಹಳ ಸರಳೀಕರಣ ಮಾಡಲಾಗಿದೆ. ಕಸ್ಟಮ್ಸ್ ನಲ್ಲಿ ಸರಳಿಕರಣ ಮಾಡಲಾಗಿದೆ. ವಿಶೇಷವಾಗಿರುವ ಕ್ಯಾನ್ಸರ್, ಎಲೆಕ್ಟ್ರಾನಿಸ್, ಮೆಡಿಕಲ್ ಸೈನ್ಸನ್, ನವ ತಂತಜ್ಞಾನಕ್ಕೆ ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ, ಕರ್ನಾಟಕಕ್ಕೆ ಖಾಲಿ ಚೊಂಬು: ಸಿಎಂ ಸಿದ್ದರಾಮಯ್ಯ ಕಿಡಿ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳು. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವ ಮುಂಚೂಣಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ.

ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸುವುದರೊಂದಿಗೆ ಸತತ 8 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆಯ ದಿಟ್ಟ ಮಹಿಳೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಪ್ರಧಾನಿ ಮೋದಿ ಅವರ ಸರ್ಕಾರವು ದೇಶದ ಆರ್ಥಿಕತೆ ಸುಭದ್ರವಾಗಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪ ಈಡೇರಿಸುವ ಅತ್ಯುತ್ತಮ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಭರವಸೆ ಮೂಡಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಯುಪಿಎ ಅವಧಿಯಲ್ಲಿ ಅನಗತ್ಯ ವೆಚ್ಚ ಹಾಗೂ ಲೂಟಿಯಿಂದಾಗಿ ಅಧಿಕ ಗಾತ್ರದ ಬಜೆಟ್‌ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವುಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದೆ ಎಂದು ಹೇಳಿದ್ದಾರೆ.

2013-14 ರ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಬಜೆಟ್‌ ಗಾತ್ರ 16,65,297 ಕೋಟಿ ರೂ. ಆಗಿತ್ತು. 2025-26 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 50,65,345 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದೆ. ಲೂಟಿಯಾಗುತ್ತಿದ್ದ ಹಣವನ್ನು ಮರಳಿ ತಂದಿದ್ದರಿಂದ ಬಜೆಟ್‌ ಗಾತ್ರ ಹೆಚ್ಚಾಗಿದೆ. ಹಿಂದೆ 11,09,997 ಕೋಟಿ ರೂ. ಯೋಜನೇತರ ವೆಚ್ಚವಾಗಿದ್ದರೆ, ಈಗ ಅದು 39,44,255 ಕೋಟಿ ರೂ. ಗೆ ಏರಿದೆ. ಬಂಡವಾಳ ವೆಚ್ಚ ಆಗ 2,29,129 ಕೋಟಿ ರೂ. (13.7%) ಆಗಿದ್ದು, ಈಗ 11,21,090 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ 9 ಲಕ್ಷ ಕೋಟಿ ರೂ. (22.13%) ಏರಿಕೆ ಕಂಡಿದೆ. ಅಂದರೆ ತೆರಿಗೆ ಸೋರಿಕೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ.

ಸಂಗ್ರಹ ಚಿತ್ರ
ರಾಯಚೂರಿನಲ್ಲಿ AIMS ಸ್ಥಾಪನೆ ಮನವಿ ತಿರಸ್ಕಾರ, ಕೇಂದ್ರದ ಈ ಬಜೆಟ್ ಕರ್ನಾಟಕದ ಪಾಲಿಗಂತೂ ಶೂನ್ಯ‌‌: ದಿನೇಶ್ ಗುಂಡೂರಾವ್

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ. ಗೆ ಏರಿಸಲಾಗಿದೆ. ಸ್ಟಾರ್ಟ್‌ಅಪ್ ಕಂಪನಿಗಳಿಗೆ 10 ಕೋಟಿ ರೂ.ನಿಂದ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ವರ್ಗದ 5 ಲಕ್ಷ ಮಹಿಳೆಯರಿಗೆ ಹೊಸ ಯೋಜನೆಯಡಿ ಟರ್ಮ್‌ಲೋನ್‌ ನೀಡಲಾಗುತ್ತದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಕೇಂದ್ರ ಸರ್ಕಾರದಿಂದ 1 ಕೋಟಿ ತಾಯಂದಿರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ತರಲಾಗಿದೆ. ಇದು ಬಾಣಂತಿಯರ ಆರೋಗ್ಯ ರಕ್ಷಣೆಗೆ ಸಹಾಯವಾಗಲಿದೆ ಎಂದು ಹೇಳಿದರು.

ಮಧ್ಯಮ ವರ್ಗಕ್ಕೆ ಬಂಪರ್‌ ಉಡುಗೊರೆ ನೀಡಲಾಗಿದೆ. 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಗಾಳಿ ಒಂದನ್ನು ಬಿಟ್ಟು ಎಲ್ಲಕ್ಕೂ ತೆರಿಗೆ ವಿಧಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ತೆರಿಗೆಯನ್ನು ಹೇರಿಲ್ಲ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಕೇಂದ್ರ ಆರಂಭಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ಕ್ಯಾನ್ಸರ್‌ ಸೇರಿದಂತೆ 36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುತ್ತದೆ. ಟಿವಿ, ಸ್ವದೇಶಿ ಉಡುಪು, ಚರ್ಮ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎಂದು ಹೇಳಿದರು.

ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಕಾಂಗ್ರೆಸ್‌ ಇನ್ನೂ ಕೇಂದ್ರದಿಂದ ತಾರತಮ್ಯ ಎಂದು ಹೇಳುತ್ತಲೇ ಇದೆ. ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಭಿನಂದನೆ ತಿಳಿಸಿಲ್ಲ. ಜಲಜೀವನ್‌ ಮಿಷನ್‌ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಎಲ್ಲ ಯೋಜನೆಗಳು ರಾಜ್ಯದ ಜನರಿಗೆ ಸಿಗಲಿದೆ. ಆದರೆ ಕರ್ನಾಟಕಕ್ಕೆ ಏನೂ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಬೆಂಗಳೂರಿಗೆ 65 ಸಾವಿರ ಕೋಟಿ ರೂ., ನೀರಾವರಿಗೆ 85 ಸಾವಿರ ಕೋಟಿ ರೂ. ಅನುದಾನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇಳಿದ್ದಾರೆ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂದು ಮೊದಲು ಲೆಕ್ಕ ಕೊಡಲಿ. ಸಿಎಂ ಸಿದ್ದರಾಮಯ್ಯ ತೆರಿಗೆಯನ್ನು ಹೋಲಿಕೆ ಮಾಡುತ್ತಾರೆ. ಆಗ ಎಲ್ಲವೂ ಸೋರಿಕೆಯಾಗುತ್ತಿದ್ದುದರಿಂದ ಹೆಚ್ಚು ಅನುದಾನ ಬರುತ್ತಿರಲಿಲ್ಲ. ಈಗ ಸೋರಿಕೆ ನಿಯಂತ್ರಣವಾಗಿದೆ. ಕಾಂಗ್ರೆಸ್‌ ನಾಯಕರು ಕಾಮಾಲೆ ಕಣ್ಣನ್ನು ಬದಿಗಿಟ್ಟು ಮಾತಾಡಲಿ ಎಂದರು.

ಸಿಎಂ ಸಿದ್ದರಾಮಯ್ಯನವರ ಸಂತೆ ಭಾಷಣವನ್ನು ಯಾರೂ ಕೇಳುವುದಿಲ್ಲ. ಮನಮೋಹನ್‌ ಸಿಂಗ್‌ ಅವರನ್ನು ಕೇಳಿದ ಕೂಡಲೇ ಅನುದಾನ ಕೊಟ್ಟಿದ್ದಾರಾ? ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕೆಂದು ಇವರೇ ನಿಯಮ ಮಾಡಿದ್ದು, ಈಗ ಇವರೇ ಅದನ್ನು ವಿರೋಧಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಜನರೇ ಚೊಂಬು ಕೊಡುವ ಕಾಲ ಬರಲಿದೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ದೂರಿದ್ದಾರೆ. ಈ ಸಮಸ್ಯೆಯನ್ನು ಮೊದಲು ಪರಿಹರಿಸಲಿ. ಈ ಸರ್ಕಾರ ಬೀಡಾಡಿ ದನಗಳಂತಾಗಿದೆ. ಇಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com