
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆಯ್ಕೆ ವಿಷಯವಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಮಂಗಳವಾರ ದೆಹಲಿಗೆ ತೆರಳುವ ಬಸನಗೌಡ ಪಾಟೀಲ್ ಯತ್ಮಾಳ್ ಬಣ ಒಂದೆರಡು ದಿನ ರಾಷ್ಟ್ರ ರಾಜಧಾನಿಯಲ್ಲೇ ಬೀಡು ಬಿಡುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ನಾಯಕರು ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ವಜಾಗೊಳಿಸುವಂತೆ ಕೋರಲಿದ್ದಾರೆ ಹಾಗೂ ಚುನಾವಣೆಯ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಬೇಡಿಕೆಯಿಡಲಿದ್ದಾರೆ.
ಫೆಬ್ರವರಿ 5 ರಂದು ದೆಹಲಿಗೆ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದು, ಶೀಘ್ರದಲ್ಲೇ ವಿಜಯೇಂದ್ರ ಅವರ ಸ್ಥಾನಕ್ಕೆ ಮತ್ತೊಬ್ಬ ನಾಯಕನನ್ನು ವರಿಷ್ಠರು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಯತ್ನಾಳ್ ಕ್ಯಾಂಪ್ ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪಕ್ಷದ ಕರ್ನಾಟಕ ಸಂಘಟನೆಯ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಮಾಡಲು ಆಗಮಿಸಬಹುದು. ಈ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಯತ್ನಾಳ್ ಮತ್ತು ಬೆಂಬಲಿಗರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತಾರೆಯೇ ಎಂಬುದು ಸದ್ಯದ ಕುತೂಹಲ. ವರಿಷ್ಠರು ಸಮ್ಮತಿಸಿದರೆ ಬಂಡಾಯ ಪಾಳಯವು ಕೂಡ ವಿಜಯೇಂದ್ರ ವಿರುದ್ಧ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ.
ಇತರ ರಾಜ್ಯ ಘಟಕಗಳಿಂದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸುವ ಪ್ರಸ್ತಾಪಗಳಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲೇ ಬೇಕು ಎಂದು ಯತ್ನಾಳ್ ಪಾಳಯವು ಒತ್ತಾಯಿಸುತ್ತಿದೆ. ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೋದರ ಸಂಬಂಧಿ ಎನ್‌ಆರ್ ಸಂತೋಷ್ ಅವರು ಯತ್ನಾಳ್ ಪಾಳಯಕ್ಕೆ ನಿಷ್ಠಾವಂತರಾಗಿದ್ದಾರೆ. ಅವರು ಸೋಮವಾರ ನವದೆಹಲಿಗೆ ಬಂದಿಳಿದಿದ್ದಾರೆ, ಯತ್ನಾಳ್ ಮತ್ತು ಹರಿಹರ ಶಾಸಕ ಬಿಪಿ ಹರೀಶ್ ಸೇರಿದಂತೆ ಇತರರು ಮಂಗಳವಾರ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.
23 ಜಿಲ್ಲೆಗಳಿಗೆ ಸಂಘಟನಾ ಅಧ್ಯಕ್ಷರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಅವರು ಹೈಕಮಾಂಡ್‌ಗೆ ಒತ್ತಾಯಿಸಲಿದ್ದಾರೆ, ತಮ್ಮ ರಾಜ್ಯಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯೇಂದ್ರ, ಯಡಿಯೂರಪ್ಪ ಕುಟುಂಬ ರಾಜಕೀಯದಿಂದ ಬೇಸತ್ತಿದ್ದಾರೆ, ರಾಜ್ಯದ ಬಿಜೆಪಿ ಸಂಸದರು ಅದರಲ್ಲೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಅವರಂತಹ ನಾಯಕರು ಒಲ್ಲದ ಮನಸ್ಸಿನಿಂದ ಪಕ್ಷದಲ್ಲಿ ತಟಸ್ಥರಾಗಿದ್ದಾರೆ. ತಮ್ಮನ್ನು ಸಂಪರ್ಕಿಸದೆ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಟಸ್ಥ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಾಳ್ ಬಣ ಕಸರತ್ತು ನಡೆಸಿದೆ
ಮೂಲತಃ ಸಂಘ ಪರಿವಾರದಿಂದ ಬಂದಿರುವ ಹಿರಿಯ ನಾಯಕ ಅರವಿಂದ ಲಿಂಬಾವಳಿ ಈಗಾಗಲೇ ಬಂಡಾಯವೆದ್ದಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಸಾಕಷ್ಟು ಲೂಟಿ ಮಾಡಿದೆ, ನಕಲಿ ಸಹಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಶಾಮೀಲಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆ ಎಂಬುದನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.
ನೇಮಕಗೊಂಡ ಜಿಲ್ಲಾಧ್ಯಕ್ಷರು ಸೇರಿದಂತೆ ಹೆಚ್ಚಿನ ಪದಾಧಿಕಾರಿಗಳು ವಿಜಯೇಂದ್ರ ಪಾಳಯಕ್ಕೆ ಸೇರಿದವರು ಎಂಬ ಅಂಶವನ್ನು ಬಂಡಾಯಗಾರರು ಎತ್ತಿ ತೋರಿಸುವ ಸಾಧ್ಯತೆಯಿದೆ ಮತ್ತು ಇದು ದೀರ್ಘಾವಧಿಯಲ್ಲಿ ಪಕ್ಷದ ಸಂಘಟನೆಯನ್ನು ಹಾನಿಗೊಳಿಸುತ್ತದೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
'ಹೈಕಮಾಂಡ್ ಈ ದೂರನ್ನು ಪರಿಗಣಿಸಿ ಪದಾಧಿಕಾರಿಗಳ ಪುನರ್ ರಚನೆಗೆ ಸೂಚಿಸಬಹುದು. ಆದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯು ಟರ್ನ್ ಆಗುವ ಸಾಧ್ಯತೆ ಕಡಿಮೆ. ವಿಶೇಷವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಹೈಕಮಾಂಡ್ ಶತೃತ್ವ ಬೆಳೆಸಿಕೊಳ್ಳುವ ದುಸ್ಸಾಹಸ ತೋರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಫೆಬ್ರವರಿ 6 ರಂದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಜಿ ಸಚಿವ ಬಿ ಶ್ರೀರಾಮುಲು ಜೊತೆಗೆ ಸಭೆಯನ್ನು ಏರ್ಪಡಿಸಿದ್ದಾರೆ, ಶ್ರೀರಾಮುಲು ಭಾಗವಹಿಸದಿರುವುದು ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಗೆ ನಷ್ಟವಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅಸಮಾಧಾನಗೊಂಡಿದ್ದಾರೆ.
Advertisement