ಅರಾಜಕತೆ ಸೃಷ್ಟಿಸುತ್ತಿದ್ದವರಿಗೆ ದೆಹಲಿ ಜನತೆ ಕಪಾಳ ಮೋಕ್ಷ: ಪ್ರಹ್ಲಾದ್ ಜೋಶಿ

ಜನ ವಿರೋಧಿ, ಅಭಿವೃದ್ಧಿ ವಿರೋಧಿ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ"ವರಿಗೆ ಬಾಗಿಲು ತೋರಿಸಿದ್ದಾರೆ. ಪ್ರಧಾನಿ ಮೋದಿಯವರ ಪ್ರಾಮಾಣಿಕ, ಸ್ವಚ್ಛ ಆಡಳಿತ ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ್ದಾರೆ.
Prallad Joshi
ಪ್ರಹ್ಲಾದ್ ಜೋಶಿ
Updated on

ಹುಬ್ಬಳ್ಳಿ: ನಕಾರಾತ್ಮಕ ರಾಜಕೀಯವನ್ನು ದೆಹಲಿ ಜನತೆ ತಿರಸ್ಕರಿಸಿದ್ದು, ಬಿಜೆಪಿಗೆ ಬಹುಮತ ನೀಡುವ ಮೂಲಕ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಮತದಾರರು ಜನ ವಿರೋಧಿ, ಅಭಿವೃದ್ಧಿ ವಿರೋಧಿ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ"ವರಿಗೆ ಬಾಗಿಲು ತೋರಿಸಿದ್ದಾರೆ. ಪ್ರಧಾನಿ ಮೋದಿಯವರ ಪ್ರಾಮಾಣಿಕ, ಸ್ವಚ್ಛ ಆಡಳಿತ ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ್ದಾರೆ. 27 ವರ್ಷಗಳ ನಂತರ, ಬಿಜೆಪಿ ಭಾರೀ ಜನಾದೇಶದೊಂದಿಗೆ ದೆಹಲಿಯಲ್ಲಿ ಐತಿಹಾಸಿಕ ಮತ್ತು ಅಭೂತಪೂರ್ವ ಪುನರಾಗಮನವನ್ನು ಮಾಡುತ್ತಿದೆ ಎಂದು ಹೇಳಿದರು.

ಕೇಜ್ರಿವಾಲ್ ಅವರ ದುರಹಂಕಾರ, ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಅವರ ಪ್ರಯತ್ನ ಮತ್ತು ಎಎಪಿಯ ರಾಜಕೀಯ ವಿಭಜನೆಯನ್ನು ಮತದಾರರು ತಿರಸ್ಕರಿಸಿದ್ದಾರೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯ ಮೂಲಕ ಅಧಿಕಾರಕ್ಕೆ ಬಂದ ಕೇಜ್ರಿವಾಲ್, ಅಂತಿಮವಾಗಿ ಸ್ವತಃ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದರು. ಈಗ ಅದರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಯಕ್ಷಮತೆ ಕುರಿತು ವ್ಯಂಗ್ಯವಾಡಿದ ಅವರು, ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಒಂದು ಪಕ್ಷ ಅತ್ಯಂತ ಹೀನಾಯವಾಗಿ‌ ಅಸ್ತಿತ್ವವನ್ನು ಕಳೆದುಕೊಳ್ಳಬಾರದು, ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ರಚನಾತ್ಮಕ‌ ವಿರೋಧ ಪಕ್ಷ ಇರಬೇಕು‌ ಅನ್ನೋದು ನಮ್ಮ‌ ಆಶಯ. ಆದರೆ, ಕಾಂಗ್ರೆಸ್ ದೇಶದಲ್ಲಿ ದಯನೀಯ ಸ್ಥಿತಿಗೆ ಬಂದು‌ ತಲುಪಿದೆ. ಇದನ್ನ‌ ಕಾಂಗ್ರೆಸ್ ಪಕ್ಷ‌ ಆತ್ಮಾವಲೋಕನ‌ ಮಾಡಿಕೊಳ್ಳಬೇಕು ಇದು ದೊಡ್ಡ ದುರ್ದೈವದ ಸಂಗತಿ ಎಂದರು.

Prallad Joshi
ದೆಹಲಿ ಚುನಾವಣೆ ಗೆಲುವು: BJP ಕಛೇರಿಯಲ್ಲಿ ಸಂಭ್ರಮಾಚರಣೆ; ಕೇಜ್ರಿವಾಲ್‌ ಮುಖವಾಡ ಕಳಚಿದೆ ಎಂದ ವಿಜಯೇಂದ್ರ

ಇವಿಎಂ ಯಂತ್ರ​ಗಳ ಮೇಲೆ ಕಾಂಗ್ರೆಸ್​ ಆರೋಪದ ಕುರಿತು ಮಾತನಾಡಿ, ಜಾರ್ಖಂಡ್ ನಲ್ಲಿ‌ ಬಿಜೆಪಿ‌ ಸೋತಾಗ ಮತ ಯಂತ್ರಗಳು ಸರಿ ಇತ್ತು. ಎಲ್ಲೆಲ್ಲಿ‌ ಅವರು ಗೆದ್ದಿದ್ದಾರೋ‌ ಅಲ್ಲೆಲ್ಲಾ ಮತಯಂತ್ರಗಳು ಸರಿಯಿರುತ್ತದೆ. ಆದರೆ, ನಾವು ಗೆದ್ದಾಗ ಮತಯಂತ್ರಗಳು ಸರಿ‌ ಇರುವುದಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಿ‌ ಎಡವಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇಡೀ ಜಗತ್ತಿನಲ್ಲಿ ಯಾವ ದೇಶದಲ್ಲೂ ಇಷ್ಟು ಬೇಗ ಫಲಿತಾಂಶ ಬರಲ್ಲ. ನಮ್ಮ‌ ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ನಮ್ಮನ್ನು ರಾಜಕೀಯವಾಗಿ ಬಯ್ಯುವುದಾದರೆ ಬಯ್ಯಲಿ. ಆದರೆ, ಪ್ರಜಾಪ್ರಭುತ್ವದ ವ್ಯವಸ್ಥೆ ತೆಗಳುವುದನ್ನು ಸಹಿಸಲು ಸಾಧ್ಯವಿಲ್ಲ.

ಕುಣಿಯೋಕೆ ಬರಲಾರದವರು ನೆಲ‌ಡೊಂಕು‌ ಎಂದ ಹಾಗೆ ಕಾಂಗ್ರೆಸ್​ನ‌ ಮಾನಸಿಕತೆ ಇದೆ. ಕೈಲಾಗದವನು ಮೈ‌ಪರಚಿಕೊಂಡ ಎಂಬಂತೆ ಮಾನಸಿಕತೆ ಇದೆ. ಕಾಂಗ್ರೆಸ್ ಈ‌ ಮನಸ್ಥಿತಿಯಿಂದ ಹೊರಬರಬೇಕು. ಅವರನ್ನ ಯಾರು ಮಣ್ಣು ಮುಕ್ಕಿಸುತ್ತಾರೋ‌ ಅಂತವರ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಜಾರ್ಖಂಡ್ ನಲ್ಲಿ ಇವರನ್ನ ಸರ್ಕಾರದಲ್ಲಿ ಸೇರಿಸಿಕೊಳ್ಳಲು ಮುಂದಾಗಲಿಲ್ಲ. ಪ್ರತಿಯೊಂದು‌ ರಾಜ್ಯದಲ್ಲೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ಹೋಗುತ್ತಿದೆ. ಕಾಂಗ್ರೆಸ್ ಒಂದು ರೀತಿ ಬಸ್ ಸ್ಟ್ಯಾಂಡ್ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿ, ರಾಜ್ಯಪಾಲರ ಕ್ರಮವನ್ನು ರಾಜಕೀಯಗೊಳಿಸಬಾರದು. ರಾಜ್ಯಪಾಲರು ಎತ್ತಿದ ಪ್ರಶ್ನೆಗಳಿಗೆ ಸರಿಯಾದ ವಿವರಗಳನ್ನು ನೀಡಬೇಕು ಎಂದು ಹೇಳಿದರು. ಇದಲ್ಲದೆ, ಸರ್ಕಾರವು ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೂ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com