
ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲೂ ಕರ್ನಾಟಕದಲ್ಲಿ ಇದೇ ರೀತಿಯ ಫಲಿತಾಂಶ ಪ್ರತಿಫಲಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ನಡೆಸಿ ತಾತ್ಕಾಲಿಕ ಗೆಲುವು ಸಾಧಿಸಬಹುದೇ ಹೊರತು ಪಕ್ಷ ಸಿದ್ಧಾಂತದೊಂದಿಗೆ ಸೆಣಸಿ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎನ್ನುವುದನ್ನು ದೆಹಲಿಯ ಫಲಿತಾಂಶ ತೋರಿಸಿಕೊಟ್ಟಿದೆ. ಭವಿಷ್ಯತ್ತಿನಲ್ಲಿ ಇದು ಕರ್ನಾಟಕದಲ್ಲೂ ಪ್ರತಿಫಲಿಸಲಿದೆ ಎಂದು ಹೇಳಿದ್ದಾರೆ.
ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಸಂದೇಶವನ್ನು ದೆಹಲಿಯ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಪಸರಿಸಿದ್ದಾರೆ. ಬಿಜೆಪಿಗೆ ದಾಖಲೆಯ ದಿಗ್ವಿಜಯ ದೊರಕಿಸಿಕೊಟ್ಟ ದೆಹಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮಾನ್ಯ ಮೋದಿಜೀ ಅವರನ್ನು ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ.
ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಹೆಗ್ಗಳಿಕೆಯ ವಿಜಯ ಸಾಧಿಸಿದೆ.
ಭಾರತೀಯ ಜನತಾ ಪಾರ್ಟಿ ದೇಶಭಕ್ತಿ ಹಾಗೂ ರಾಷ್ಟ್ರ ಕಟ್ಟುವ ಲಕ್ಷಾಂತರ ಕಾರ್ಯಕರ್ತರನ್ನೊಳಗೊಂಡ ವಿಶ್ವ ದಾಖಲೆ ನಿರ್ಮಿಸಿರುವ ರಾಜಕೀಯ ಪಕ್ಷವಾಗಿದೆ. ಬಿಜೆಪಿಯ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ನಡೆಸಿ ತಾತ್ಕಾಲಿಕ ಗೆಲುವು ಸಾಧಿಸಬಹುದೇ ಹೊರತು ಪಕ್ಷ ಸಿದ್ಧಾಂತದೊಂದಿಗೆ ಸೆಣಸಿ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎನ್ನುವುದನ್ನು ದೆಹಲಿಯ ಫಲಿತಾಂಶ ತೋರಿಸಿಕೊಟ್ಟಿದೆ. ಭವಿಷ್ಯತ್ತಿನಲ್ಲಿ ಇದು ಕರ್ನಾಟಕದಲ್ಲೂ ಪ್ರತಿಫಲಿಸಲಿದೆ.
ದೆಹಲಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮಡಿಲಿಗೆ ಸಮರ್ಪಿಸಿರುವ ದೆಹಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಮಾರ್ಗದರ್ಶನದಲ್ಲಿ ನೂತನ ಸರಕಾರ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎನ್ನುವುದು ದೆಹಲಿ ಚುನಾವಣೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಪಕ್ಷ ಪ್ರಮುಖರು ಹಾಗೂ ಕಾರ್ಯಕರ್ತರ ಅಭಯವಾಗಿದೆ. ಈ ಚುನಾವಣೆ ಬಿಜೆಪಿಯ ಕಾರ್ಯಕರ್ತರು ಹಾಗೂ ದೆಹಲಿಯ ಜನತೆಯ ಚಾರಿತ್ರಿಕ ಜಯವಾಗಿದೆ ಎಂದು ತಿಳಿಸಿದ್ದಾರೆ.
Advertisement