
ಬೆಳಗಾವಿ: ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಂಕಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆ ಆಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ಈಗ ಸತೀಶ್ ಅವರ ಪುತ್ರ ಕೂಡ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಆನ್ ಲೈನ್ ಮೂಲಕ ನಡೆದ ಚುನಾವಣೆಯಲ್ಲಿ 1,20,000 ಕ್ಕಿಂತ ಅಧಿಕ ಮತಗಳನ್ನು ಪಡೆದು ರಾಹುಲ್ ಜಾರಕಿಹೊಳಿ ಆಯ್ಕೆ ಆಗಿದ್ದಾರೆ.
ಬೆಳಗಾವಿ ಜಿಲ್ಲೆಯ ಒಂದು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಅವರನ್ನು ಕಣಕ್ಕಿಳಿಸುವ ಅವಕಾಶಕ್ಕಾಗಿ ಜಾರಕಿಹೊಳಿ ಕುಟುಂಬ ಕಾಯುತ್ತಿತ್ತು ಎನ್ನಲಾಗಿದ್ದು, 2028 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ರಾಹುಲ್ ಸ್ಪರ್ಧಿಸುವುದು ಖಚಿತ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಚುನಾವಣಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಅವರು ಸ್ಪರ್ಧಿಸಬಹುದು ಎಂದು ಹೇಳಲಾಗತ್ತಿದೆ. ಪ್ರಸ್ತುತ ಈ ಕ್ಷೇತ್ರವನ್ನು ಬಿಜೆಪಿ ಶಾಸಕ ನಿಖಿಲ್ ಕಟ್ಟಿ ಪ್ರತಿನಿಧಿಸುತ್ತಿದ್ದಾರೆ, ನಿಖಿಲ್ ಅವರು ಮಾಜಿ ಸಚಿವ ದಿವಂಗತ ಉಮೇಶ್ ಕಟ್ಟಿ ಅವರ ಪುತ್ರರಾಗಿದ್ದಾರೆ.
ಈಗಾಗಲೇ ಸತೀಶ್ ಜಾರಕಿಹೊಳಿ ಅವರ ಎಲ್ಲಾ ಸಹೋದರರು ರಾಜಕೀಯಕ್ಕೆ ಎಂಟ್ರಿಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಅವರ ಪುತ್ರಿ ಮತ್ತು ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಈ ಮೂಲಕ ಪುತ್ರಿಯನ್ನೂ ರಾಜಕೀಯಕ್ಕೆ ಕರೆತಂದಿದ್ದರು.
ಇದೀಗ ಸತೀಶ ಜಾರಕಿಹೊಳಿ ಅವರು ಪುತ್ರ ರಾಹುಲ್ ಜಾರಕಿಹೊಳಿ ಅವರು ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ.
ಈಗಾಗಲೇ ಮಗಳನ್ನ ಸಂಸದೆಯನ್ನಾಗಿ ಮಾಡಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ ಪುತ್ರ ರಾಜಕೀಯ ಭವಿಷ್ಯ ರೂಪಿಸಲು ಮಾಸ್ಟರ್ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಆರಂಭದಲ್ಲಿಯೇ ಮಗನಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ನೀಡಿದ್ದು, ಪಕ್ಷ ಸಂಘಟನೆಯ ಜೊತೆ ಜನರ ಮನ ಗೆಲ್ಲುವ ಅವಕಾಶವನ್ನ ಸತೀಶ್ ಜಾರಕಿಹೊಳಿ ಅವರು ಸೃಷ್ಟಿಸಿದ್ದಾರೆನ್ನಲಾಗಿದೆ,
ಎಂಜಿನಿಯರಿಂಗ್ ಪದವೀಧರರಾದ ರಾಹುಲ್, ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಪರ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಪ್ರಿಯಾಂಕಾ ಅವರ ಗೆಲುವಿನಲ್ಲಿ ರಾಹುಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು
Advertisement