
ಬೆಂಗಳೂರು: ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿವೆ.
ವಿವಿಧ ಇಲಾಖೆಗಳ ಸಮಗ್ರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸೂಕ್ಷ್ಮವಾದ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಾರ್ಚ್ ಮೂರರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಅಧಿವೇಶನದ ಮೊದಲ ದಿನ ಮಾರ್ಚ್ 3ರಂದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಜ್ಯಪಾಲರ ಭಾಷಣದ ಮೇಲೆ ಸದನದಲ್ಲಿ ಮೂರು ದಿನ ಚರ್ಚೆ ನಡೆಯಲಿದೆ. ನಂತರ ಮಾರ್ಚ್ 7 ರಂದು ವಿಧಾನಸಭೆಯಲ್ಲಿ ಈ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಹೊರತು ಪಡಿಸಿ 14 ದಿನ ಬಜೆಟ್ ಅಧಿವೇಶನದ ಕಲಾಪಗಳು ನಡೆಯಲಿವೆ. ಬಜೆಟ್ ಮೇಲಿನ ಚರ್ಚೆಗೆ ಕೇವಲ 14 ದಿನಗಳ ಮಾತ್ರ ಉಳಿಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಕಿಡಿಕಾರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ವಿಧಾನಮಂಡಲ ಅಧಿವೇಶನಗಳನ್ನು ಸೂಕ್ತ ರೀತಿಯಲ್ಲಿ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲ. ಬೆಂಗಳೂರು ನಗರ ಒಂದಕ್ಕೇ 2-3 ದಿನಗಳ ಚರ್ಚೆಯ ಅಗತ್ಯವಿದೆ. ಬೆಳಗಾವಿ, ಇತರೆ ಜಿಲ್ಲೆಗಳ ಸಮಸ್ಯೆಗಳು ಸಾಕಷ್ಟವಿದೆ. ಅದಕ್ಕೆ ಸಮಯವಿಲ್ಲ. ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಏನು ಮಾತನಾಡುತ್ತಾರೆ? ಹೀಗಾಗಿ ಹೆಚ್ಚಿನ ದಿನ ಅಧಿವೇಶನಕ್ಕೆ ಮೀಸಲಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಸ್ಥಿತಿ ತಲುಪಿದೆ. ಇಂತಹ ಬಿಕ್ಕಟ್ಟಿನಲ್ಲಿ ಬಜೆಟ್ ಮಂಡನೆ ಮಹತ್ವವನ್ನು ಹೊಂದಿದೆ. ಹೀಗಾಗಿ ಸಂಪೂರ್ಣ ಪರಿಶೀಲನೆಯ ಅಗತ್ಯವಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಪ್ರಾದೇಶಿಕ ಅಭಿವೃದ್ಧಿಯಂತಹ ನಿರ್ಣಾಯಕ ಕ್ಷೇತ್ರಗಳು ಬಿಕ್ಕಟ್ಟಿನಲ್ಲಿವೆ, ಹೀಗಾಗಿ ಚರ್ಚೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಜಾಪ್ರಭುತ್ವದ ಬಗ್ಗೆ ಬೋಧಿಸುತ್ತದೆ, ಆದರೆ ಪ್ರಜಾಪ್ರಭುತ್ವದ ಕುರಿತು ವಿವರವಾದ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸರ್ಕಾರವು, ಚರ್ಚೆಯನ್ನು ಮೊಟಕುಗೊಳಿಸುವ ಮೂಲಕ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ, ಹೊಣೆಗಾರರನ್ನಾಗಿ ಮಾಡಬಹುದು ಎಂದು ಚರ್ಚೆಯನ್ನೇ ಮೊಟಕುಗೊಳಿಸುತ್ತಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ವರ್ಷಕ್ಕೆ 100 ದಿನಗಳ ಕಾಲ ವಿಧಾನಸಭೆ ಒಟ್ಟಿಗೆ ಸೇರುತ್ತದೆ. ಆದರೆ, ಸರ್ಕಾರ ಅದನ್ನು 60 ಕ್ಕೆ ಕಡಿತಗೊಳಿಸಿತು. ಈಗ, 15 ದಿನಕ್ಕೆ ಇಳಿಸಿದೆ. ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆಯಲ್ಲಿ ಕೆಲ ದಿನಗಳು ಹೋದರೆ ಚರ್ಚೆಗೆ ಕೇವಲ 10 ದಿನಗಳು ಉಳಿಯುತ್ತವೆ. ಇಷ್ಟು ದಿನಗಳಲ್ಲಿ ಪರಿಣಾಮಕಾರಿಯಾಗಿ ಚರ್ಟೆ ನಡೆಸಲು ಹೇಗೆ ಸಾಧ್ಯ. ನಮಗೆ ಕನಿಷ್ಠ 20-21 ದಿನಗಳು ಬೇಕು ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ನಾಯಕ ಟಿ.ಎ.ಶರವಣ ಅವರು ಮಾತನಾಡಿ, ಇದು ಸರ್ಕಾರ ವೈಫಲ್ಯವನ್ನು ತೋರಿಸುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಒಂದು ದಿನ ಮುಂಚಿತವಾಗಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ. ನಿರ್ಲಕ್ಷ್ಯದ ನೋವುನ್ನು ನಾವು ಅನುಭವಿಸುತ್ತಿದ್ದೇವೆ. ಶಾಸಕರಿಗೆ ರಿಕ್ಲೈನರ್‌ಗಳನ್ನು ಖರೀದಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಮಗೆ ಅದಕ್ಕಿಂತಲೂ ಚರ್ಚೆ ನಡೆಸಲು ಕಾಲಾವಕಾಶದ ಅಗತ್ಯವಿದೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಕನಿಷ್ಟ 30 ದಿನಗಳು ಬೇಕು ಎಂದು ಒತ್ತಾಯಿಸಿದ್ದಾರೆ.
Advertisement