
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹೆಚ್ಚುತ್ತಿರುವ ಆಂತರಿಕ ಕಚ್ಚಾಟದ ನಡುವೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿದ್ದು, ಭಿನ್ನಮತೀಯ ನಾಯಕರು ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ನಿನ್ನ ಮಧ್ಯಾಹ್ನ 2.30ಕ್ಕೆ ದೆಹಲಿ ತಲುಪಿದ ವಿಜಯೇಂದ್ರ ಅವರು ಸಂಜೆ ಅಮಿತ್ ಶಾ ಅವರನ್ನು ಭೇಟಿ ಮಾಡಿ “ವಚನ’ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.
ಕೇಂದ್ರ ನಾಯಕರನ್ನು ಭೇಟಿ ಮಾಡುವ ಮೂಲಕ ಪಕ್ಷದೊಳಗಿನ ಟೀಕಾಕಾರರಿಗೆ ಅದರಲ್ಲೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ತಮ್ಮ ಜೊತೆಗಿದ್ದು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಗಟ್ಟಿ ಸಂದೇಶ ರವಾನಿಸಿದ್ದಾರೆ.
ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, ಉಕ್ಕಿನ ಮನುಷ್ಯ ಎಂದು ಬಣ್ಣಿಸಲ್ಪಡುವ ಸರ್ದಾರ್ ವಲ್ಲಭಾಯಿ ಪಟೇಲರ ನಂತರ ದೇಶಕಂಡ ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು 2025ರ ನೂತನ ಕ್ಯಾಲೆಂಡರ್ ಹೊಸವರ್ಷದ ದಿನವಾದ ಇಂದು ನವದೆಹಲಿಯಲ್ಲಿ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು.
ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರುಗಳ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು.
ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಜೀ ಯವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ, ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕದಲ್ಲಿ ಸದಾ ನನಗೆ ಪ್ರೇರಣೆಯ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ವಿಜಯೇಂದ್ರ ಅವರು, ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಮಾತುಕತೆ ವೇಳೆ ವಿಜಯೇಂದ್ರ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳನ್ನು ಸವಿಸ್ತಾರವಾಗಿ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ.ನಡ್ಡಾರನ್ನೂ ಭೇಟಿಮಾಡಲು ವಿಜಯೇಂದ್ರ ಅವರು ಪ್ರಯತ್ನ ನಡೆಸುವ ನಿರೀಕ್ಷೆಯಿದೆ.
ವಿಜಯೇಂದ್ರ ಅವರು ರಾಜಾಧ್ಯಕ್ಷರಾದಾಗಿನಿಂದಲೂ ಅವರ ನಾಯಕತ್ವದ ವಿರುದ್ಧ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಅವರು ಬಹಿರಂಗವಾಗಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಯತ್ನಾಳ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಇತರ ಕೆಲ ನಾಯಕರೂ ಕೈಜೋಡಿಸಿದ್ದಾರೆ. ಅಲ್ಲದೆ, ವಕ್ಸ್ ವಿಚಾರವಾಗಿ ಪಕ್ಷವನ್ನು ಕಡೆಗಣಿಸಿ ತಮ್ಮದೇ ಬಣವೊಂದನ್ನು ಕಟ್ಟಿಕೊಂಡು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲದರಿಂದ ಪಕ್ಷ ಸಂಘಟನೆಗೆ ಅಡಚಣೆಯಾಗುತ್ತಿದೆ. ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ಆಹಾರವಾಗುತ್ತಿದೆ ಎಂಬ ಅಂಶವನ್ನು ವಿಜಯೇಂದ್ರ ಅವರು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯತ್ನಾಳ್ ಬಣದ ಈ ಚಟುವಟಿಕೆಗಳಿಂದ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ, ಬಿಬಿಎಂಪಿ ಚುನಾವಣೆ ಎದುರಾಗುವುದರಿಂದ ಪಕ್ಷ ಸಂಘಟನೆ ಬಲಪಡಿಸಬೇಕಾಗಿದೆ. ಎಲ್ಲ ನಾಯಕರೂ ಪಕ್ಷದ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವಂತಾಗಬೇಕು. ಪಕ್ಷದ ನಾಯಕತ್ವವನ್ನು ಮೀರಿ ತಮ್ಮದೇ ಹಾದಿ ತುಳಿದರೆ ಅದು ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕವನ್ನು ವಿಜಯೇಂದ್ರ ಅವರು ಅಮಿತ್ ಶಾ ಮುಂದೆ ವಿವರಿಸುವ ಪ್ರಯತ್ನ ಮಾಡಿದ್ದು, ವಿಜಯೇಂದ್ರ ಅವರ ಮಾತ ಮಾತುಗಳನ್ನು ಆಲಿಸಿರುವ ಅಮಿತ್ ಶಾ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement