Pen drive ಹಂಚಿ, ಅಚಾನಕ್ಕಾಗಿ ಸಂಸದರಾಗಿದ್ದೀರಿ: ಶ್ರೇಯಸ್ ಪಟೇಲ್‌ಗೆ ಸೂರಜ್ ರೇವಣ್ಣ ತಿರುಗೇಟು

ಎಚ್‌ಡಿ ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ದು, ಹೀಗಾಗಿ ಸಹೋದರ ಮತ್ತು ಮಾಜಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ವೀಡಿಯೋ ಇರುವ ಪೆನ್‌ಡ್ರೈವ್ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
Suraj Revanna
ಸೂರಜ್ ರೇವಣ್ಣ
Updated on

ಹಾಸನ: ಪೆನ್‌ಡ್ರೈವ್ ಹಂಚಿ ಅಚಾನಕ್ ಆಗಿ ಸಂಸದರಾಗಿದ್ದೀರಿ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೇಯಸ್ ಪಟೇಲ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು, ಎಚ್‌ಡಿ ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ದು, ಹೀಗಾಗಿ ಸಹೋದರ ಮತ್ತು ಮಾಜಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ವೀಡಿಯೋ ಇರುವ ಪೆನ್‌ಡ್ರೈವ್ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆಂದು ವಾಗ್ದಾಳಿ ನಡೆಸಿದರು.

ಬಳಿಕ ಸೂರಜ್‌ ರೇವಣ್ಣ ಎಂಎಲ್‌ಸಿ ಆಗಿ ಮೂರು ವರ್ಷದಲ್ಲಿ ಎಷ್ಟು ಗ್ರಾಮ ಪಂಚಾಯತ್‌ಗೆ ಹೋಗಿದ್ದಾರೆ? ಏನು ಕೆಲಸ ಮಾಡಿದ್ದಾರೆ ಎಂಬ ಶ್ರೇಯಸ್‌ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಸದನಾಗಿ ಆರು ತಿಂಗಳಾಗಿದೆ. ಹಾಸನ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಅವರಿಗೆ ಮಾಹಿತಿ ಕೊರತೆ ಇರಬೇಕು. ಮಾಡಿರುವ ಕೆಲಸ ಕಣ್ಣೆದುರೇ ಇದೆ. ನಾನು ಇಡೀ ಜಿಲ್ಲೆಗೆ ಸಹಕಾರ ಆಗುವ ರೀತಿ ಅನುದಾನ ಕೊಟ್ಟಿದ್ದೇನೆ. 3 ವರ್ಷದಲ್ಲಿ 50 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಪೆನ್‍ಡ್ರೈವ್ ಹಂಚಿ ನೀವು ಅಚಾನಕ್ಕಾಗಿ ಸಂಸದರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸಂಸದನಾಗಿದ್ದೇನೆ ಎಂದು ದೊಡ್ಡದಾಗಿ ಕೇಂದ್ರ ಸಚಿವರಿಗೆ ಮನವಿ ಕೊಡುವುದಲ್ಲ. ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರದ್ದೇ ಇದೆ. ರೈಲ್ವೆ ಬ್ಯಾರಿಕೇಡ್ ಎಷ್ಟು ಕಡೆ ಅಳವಡಿಸಿದ್ದಾರೆ? ಕೇಂದ್ರ ಸರ್ಕಾರದ ಬಳಿ ಏಕೆ ಹೋಗಬೇಕು? ಹಳ್ಳಿಗಳಿಗೆ ಹೋಗಿ ಕೇಳಿ ನಿಮ್ಮ ಕುಟುಂಬದ ಕೊಡುಗೆ ಏನಿದೆ? ನಮ್ಮ ಕೊಡುಗೆ ಏನಿದೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

Suraj Revanna
ಯಾವ ಸರ್ಕಾರವೂ ಶಾಶ್ವತವಲ್ಲ; ನಾನು, ಪ್ರಜ್ವಲ್ ಹಾಸನ ಜನರ ಋಣ ತೀರಿಸ್ತೀವಿ: ಸೂರಜ್ ರೇವಣ್ಣ

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಆರೋಗ್ಯ ಕೇಂದ್ರಗಳು, ಮೆಡಿಕಲ್ ಕಾಲೇಜು, ರಸ್ತೆಗಳನ್ನು ಮಾಡಿಸಿದ್ದಾರೆ. ರೈತರಿಗೆ ಶಾಶ್ವತವಾಗಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಕೆಲಸ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಮೈಕ್ ಹಿಡಿದು ಪ್ರಚಾರ ತಗೊಳೊದನ್ನು ಹೇಳಿಕೊಟ್ಟಿಲ್ಲ. ವಾರಕ್ಕೆ ಒಂದು ದಿನ ಪ್ರೆಸ್‍ಮೀಟ್ ಮಾಡಿ ಪ್ರಚಾರ ತಗೊಳೊದಲ್ಲ ಎಂದು ಕಿಡಿಕಾರಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪ್ರಯತ್ನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಸನ ಜಿಲ್ಲೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮಂಜೂರು ಮಾಡಲು ಚಿಂತನೆ ನಡೆಸುತ್ತಿದೆ. ಮಂಜೂರಾದರೆ ಅದರ ಶ್ರೇಯ ಸಂಪೂರ್ಣವಾಗಿ ಗೌಡರಿಗೆ ಸಲ್ಲುತ್ತದೆಯೇ ಹೊರತು ಶ್ರೇಯಸ್ ಪಟೇಲರಿಗಲ್ಲ. ಶ್ರೇಯಸ್ ಅವರು ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಅವರ ಮಾನಸಿಕವಾಗಿ ಅಸ್ವಸ್ಥತೆಯನ್ನು ತೋರಿಸುತ್ತದೆ.

ಕಾಂಗ್ರೆಸ್ ನಾಯಕರು ರೇವಣ್ಣ ಅವರ ಕುಟುಂಬ ಮುಗಿಸುವ ಅಜೆಂಡಾ ಇಟ್ಟುಕೊಂಡಿದ್ದಾರೆ. ರೇವಣ್ಣ ಅವರನ್ನು ಅರೆಸ್ಟ್ ಮಾಡಿಸಿದರು. ನನ್ನ ಮೇಲೂ ಕೇಸ್ ಹಾಕಿಸಿದ್ರು. ನಮ್ಮ ತಾಯಿಯವರ ಮೇಲೂ ಕೇಸ್ ಹಾಕಿ ಬಂಧಿಸುವ ಯತ್ನ ಮಾಡಿದ್ದರು. ಭವಾನಿ ರೇವಣ್ಣ ಭಯೋತ್ಪಾದಕರಾ? 50, 60 ಲಕ್ಷ ರೂ. ಖರ್ಚು ಮಾಡಿಸಿ ಸುಪ್ರೀಂಕೋರ್ಟ್ ತನಕ ಹೋಗಿ ವಾದ ಮಾಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಆ್ಯಸಿಡ್ ದಾಳಿ ಬಗ್ಗೆ ಇಲ್ಲಿಯವರೆಗೂ ದೇವೇಗೌಡರಾಗಲಿ, ರೇವಣ್ಣ ಆಗಲಿ ಮಾತಾಡಿಲ್ಲ ಎಂಬ ಸಂಸದ ಶ್ರೇಯಸ್ ಪಟೇಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಅಜ್ಜಿ ಹಾಗೂ ತಾಯಿ ಮೇಲೆ 25 ವರ್ಷಗಳ ಹಿಂದೆ ಆಸಿಡ್ ದಾಳಿ ಆಗಿತ್ತು. ಆಗ ಸಹ ಕಾಂಗ್ರೆಸ್ ಸರ್ಕಾರ ಇತ್ತು. ಇಲ್ಲಿ ಕಾಂಗ್ರೆಸ್ ಸಂಸದರು ಇದ್ದರು. ಅದರ ಹಿಂದೆ ಅಂದಿನ ಸಂಸದರ ಕೈವಾಡ ಇತ್ತು ಎಂದು ಜನ ಮಾತಾಡಿಕೊಳ್ತಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ದೇವೇಗೌಡರು ಯಾಕೆ ಮಾತಾಡಬೇಕು? ಇವರದೆ ಸರ್ಕಾರ ಇದೆ ಸಿಬಿಐ ತನಿಖೆಗೆ ಕೊಡಲಿ. ಸತ್ಯಾಸತ್ಯತೆ ಗೊತ್ತಾಗಲಿದೆ ಎಂದೂ ಸವಾಲು ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com