
ಹೊಳೆನರಸೀಪುರ: ಹಾಸನ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದಿಸಿ ವಿವಾದವನ್ನು ಹುಟ್ಟುಹಾಕಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಸೂರಜ್ ರೇವಣ್ಣ ಭಾಷಣ ಮಾಡುವಾಗ ಅವಾಚ್ಯ ಶಬ್ದವನ್ನು ಬಳಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಹಾಸನದಲ್ಲಿ ಇರುವುದು ಎರಡೇ ಪಕ್ಷ, ಒಂದು ದೇವೇಗೌಡರ ಪರ, ಇನ್ನೊಂದು ವಿರುದ್ಧವಾಗಿರುವವರ ಪಕ್ಷ. ಅಂದು ನಮ್ಮ ತಾತನವರು ಹೇಳಿದ್ದ ಮಾತು ನನಗೆ ಈಗ ಅರ್ಥವಾಗುತ್ತಿದೆ. ನಾನು ಇಲ್ಲಿಗೆ ಬಂದಾಗ ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮು… ಕಣ್ಣು ಅಂತಾ ದೃಷ್ಟಿ ತೆಗೆದರು. ಆಗ ನಾನು ಮನಸ್ಸಿನಲ್ಲಿ ಅಂದುಕೊಂಡೆ ಕೆಟ್ಟ ಸೂ… ಕಣ್ಣು ಅಂತಾ ಯಾಕೆ ಹೇಳಲಿಲ್ಲವೆಂದು. ಯಾಕೆಂದರೆ ಪಕ್ಷದಲ್ಲಿದ್ದುಕೊಂಡೆ ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೇ, ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ನಾನು ಯಾವ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿಲ್ಲ. ತಪ್ಪು ತಿಳಿದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಪಕ್ಷದೊಳಗಿದ್ದು ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. “ಕೆಟ್ಟ ಸೂ…. ಕಣ್ಣು ತೆಗೆದು ಬಿಡವ್ವ” ಅಂತ ಹೇಳಿದೆ ಎಂದು ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಆಕ್ರೋಶಗೊಂಡರು.
ಪೆನ್ ಡ್ರೈವ್ ಹಂಚಿ ನಾನು ಎಂಎಲ್ ಸಿ ಆಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ, ಯಾರು ಬರುತ್ತಾರೋ, ಬಿಡ್ತಾರೋ ಆದರೆ ನಾನು ಮಾತ್ರ ಬರುತ್ತೇನೆ. ಯಾವುದೇ ಜಾತಿ ಹಾಗೂ ಜನಾಂಗ ನೋಡದೇ ಕೆಲಸ ಮಾಡುತ್ತೇನೆ. ನಮ್ಮ ತಾತ ದೇವೇಗೌಡರು ಯಾವುದೇ ಜಾತಿ ನೋಡಬೇಡ ಅಂದಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು, ಆದರೆ, ಅವರಿಗೆ ಅರ್ಥವಾದ ಬಳಿಕ ನಿನ್ನ ಕೈಹಿಡಿಯುತ್ತಾರೆ ಅಂತಾ ಹೇಳಿದ್ದಾರೆ ಎಂದು ತಿಳಿಸಿದರು.
Advertisement