ಪಕ್ಷ ಮತ್ತೊಮ್ಮೆ ಅವಕಾಶ ನೀಡಲಿದೆ: ಬಿ.ವೈ ವಿಜಯೇಂದ್ರ ವಿಶ್ವಾಸ
ರಾಯಚೂರು: ಬಿಜೆಪಿ ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ರಾಜಕೀಯ ಪಕ್ಷವಾಗಿದ್ದು, ಕಳೆದೊಂದು ವರ್ಷದಲ್ಲಿ ಪಕ್ಷದ ಹಿರಿಯ ನಾಯಕರು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಪಕ್ಷ ಮುನ್ನಡೆಸಲು ಮತ್ತೊಮ್ಮೆ ಅವಕಾಶ ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ಹೇಳಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಶಾಸಕ ಬಸನಗೌಡ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ನನಗೆ ಅವಕಾಶ ಕೊಡುವ ಸಂಪೂರ್ಣ ವಿಶ್ವಾಸವಿದೆ. ಪಕ್ಷವನ್ನು ಮುನ್ನಡೆಸಲು ಮತ್ತು ಎಲ್ಲರೊಂದಿಗೂ ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಳಿಕ ಮಾನ್ವಿ ಪಟ್ಟಣದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ನೇತೃತ್ವದಲ್ಲಿ ಕೆಎಸ್ ಎನ್ ಸಮಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವಿಜಯೇಂದ್ರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಪಕ್ಷದ ನಾಯಕರೊಂದಿಗೆ ಚರ್ಚಿಸಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್‌ಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.