ಇನ್ನೆರಡು ತಿಂಗಳಲ್ಲಿ ಯತ್ನಾಳ್ ವಿಪಕ್ಷ ನಾಯಕ ಸಾಧ್ಯತೆ: BJP ಶಾಸಕ ಬಿ.ಪಿ ಹರೀಶ್

ಯತ್ನಾಳ್ ಅವರು ರಾಜ್ಯ ಬಿಜೆಪಿಯ ಮಾಸ್ ಲೀಡರ್ ಆಗಿದ್ದು, ಯಾವುದೇ ರಾಜಿ ಇಲ್ಲದೆ ಎದುರಾಳಿಗಳನ್ನು ಎದುರಿಸುತ್ತಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Updated on

ದಾವಣಗೆರೆ: ವಿಜಯಪುರ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇನ್ನೆರಡು ತಿಂಗಳೊಳಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಲು ಅಗತ್ಯವಿರುವ ನಾಯಕತ್ವ ಗುಣ ಯತ್ನಾಳ್ ಅವರಲ್ಲಿದೆ. ಯತ್ನಾಳ್ ಅವರು ರಾಜ್ಯ ಬಿಜೆಪಿಯ ಮಾಸ್ ಲೀಡರ್ ಆಗಿದ್ದು, ಯಾವುದೇ ರಾಜಿ ಇಲ್ಲದೆ ಎದುರಾಳಿಗಳನ್ನು ಎದುರಿಸುತ್ತಾರೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ, ಯತ್ನಾಳ್ ಮತ್ತು ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿಯ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು,

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ”ವಿಜಯೇಂದ್ರ ಯಾವಾಗಲೂ ಪೂಜ್ಯ ತಂದೆಯವರು ಎಂದು ಹೇಳಿಕೊಂಡೇ ಬಂದಿದ್ದಾರೆ. ಅವರು ಕೇವಲ ತಮ್ಮ ತಂದೆಯವರ (ಬಿ.ಎಸ್. ಯಡಿಯೂರಪ್ಪ) ಹೆಸರನ್ನು ಹೇಳುವುದನ್ನು ಬಿಟ್ಟು ತಮ್ಮ ಸಾಧನೆ ಏನು? ಪಕ್ಷಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಬೇಕು ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಅನೇಕರಿದ್ದಾರೆ. ಯಡಿಯೂರಪ್ಪ ಒಬ್ಬರೇ ಅಲ್ಲ ಎಂದು ತಿಳಿಸಿದರು,

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ರಾಜ್ಯಾಧ್ಯಕ್ಷನಾಗಲು ವಿಜಯೇಂದ್ರ ಲಾಯಕ್ಕಿಲ್ಲ, ನಾವ್ಯಾರು ಒಪ್ಪಲ್ಲ: ಯತ್ನಾಳ್ ವಾಗ್ದಾಳಿ

ರಮೇಶ ಜಾರಕಿಹೊಳಿಯವರ ಬಗ್ಗೆ ಮಾತನಾಡುವಾಗ ವಿಜಯೇಂದ್ರ ಅವರು ಹೀಗೆಲ್ಲ ಮಾತನಾಡಿದರೆ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂಬ ಬೆದರಿಕೆಯ ಹೇಳಿಕೆ ನೀಡಿದ್ದೇ ಅವರಿಗೆ ಅನುಭವ ಕೊರತೆ ಇರುವುದನ್ನು ಸಾಬೀತುಪಡಿಸುತ್ತದೆ. ರಮೇಶ ಜಾರಕಿಹೊಳಿಯವರು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲೆಂದೇ ಬಿಜೆಪಿಗೆ ಬಂದವರು ಎಂಬುದನ್ನು ಅವರು ಮರೆತಿದ್ದಾರೆ ಎಂದರು.

ಪ್ರತಿಪಕ್ಷದಿಂದ ಬಿಜೆಪಿಗೆ ಬಂದ 17 ಶಾಸಕರ ಬೆಂಬಲದಿಂದಾಗಿ ಯಡಿಯೂರಪ್ಪ ಅವರು 2019 ರಲ್ಲಿ ಸರ್ಕಾರ ರಚಿಸಿದರು, ಅದರಲ್ಲಿ ರಮೇಶ್ ನಿರ್ಣಾಯಕ ಪಾತ್ರ ವಹಿಸಿದ್ದವು. ರಮೇಶ್ ಅವರ ಕೊಡುಗೆಯನ್ನು ಮರೆತು ಅವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.

ಚುನಾವಣೆಯಲ್ಲಿ ನಾಗರಾಜಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಶಿಕಾರಿಪುರದಿಂದ ವಿಜಯೇಂದ್ರ ಸೋಲುತ್ತಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜಯೇಂದ್ರ ಅವರ ಆಯ್ಕೆ ಕಾಂಗ್ರೆಸ್ ನ ಭಿಕ್ಷೆ ಎಂದು ಹೇಳಿದರೂ ವಿಜಯೇಂದ್ರ ಅದಕ್ಕೆ ಈವರೆಗೂ ಏನೂ ಉತ್ತರ ಕೊಟ್ಟಿಲ್ಲ. ಯಡಿಯೂರಪ್ಪ ಅವರ ಸಹಿ ಫೋರ್ಜರಿ ಮಾಡಿದ್ದಾರೆಂಬ ಕಾಂಗ್ರೆಸ್ಸಿಗರ ಆರೋಪದ ವಿರುದ್ಧವೂ ಪ್ರತಿಭಟಿಸಿಲ್ಲ. ಇನ್ನು ಆಡಳಿತ ಪಕ್ಷವನ್ನು ಕಟ್ಟಿಹಾಕಲು ಅವರು ಸದನದಲ್ಲಿ ಅರ್ಧ ಗಂಟೆಯೂ ಇರುವುದಿಲ್ಲ. ಇಂತಹ ಅಧ್ಯಕ್ಷರಿಗಿಂತ ಅನುಭವಿ, ದಕ್ಷ ಹಾಗೂ ಭ್ರಷ್ಟಾಚಾರ ಆರೋಪಮುಕ್ತ ಅಧ್ಯಕ್ಷರ ಅಗತ್ಯತೆ ರಾಜ್ಯ ಬಿಜೆಪಿಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com