
ಹಾವೇರಿ: ಕಾಂಗ್ರೆಸ್ ಸಂವಿಧಾನವನ್ನು ನಿಷ್ಪರಿಣಾಮಕಾರಿಯಾಗಿ ಮಾಡಿದೆ ಮತ್ತು 'ಸ್ವಾರ್ಥ ಲಾಭಕ್ಕಾಗಿ' ನ್ಯಾಯಾಂಗವನ್ನು ಅವಮಾನಿಸಿದೆ. ಅಧಿಕಾರದಲ್ಲಿ ಉಳಿಯಲು ಕಾಂಗ್ರೆಸ್ ಅನೇಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ, ಮೂಲಭೂತವಾಗಿ ಸಂವಿಧಾನವನ್ನು ಕೊಲ್ಲುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ಬಿಜೆಪಿ ಗುರುವಾರ ಶಿವಶಕ್ತಿ ಅರಮನೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷವು ‘ಜೈ ಬಾಪು’ ಎಂದು ಹೇಳುವ ಮೂಲಕ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದೆ ಹಾಗೂ ‘ಜೈ ಭೀಮ್’ ಎಂದು ಹೇಳುವ ಮೂಲಕ ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಭ್ರಷ್ಟಾಚಾರವನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಾಗ, ರಾಹುಲ್ ಗಾಂಧಿಯವರು ಆ ಪ್ರಸ್ತಾಪಗಳನ್ನು ಹರಿದು ಹಾಕಿದರು. ಇದು ಸಂವಿಧಾನದ ಮೇಲಿನ ಕಾಂಗ್ರೆಸ್ ಗೌರವವನ್ನು ಪ್ರತಿಬಿಂಬಿಸುತ್ತದೆ' ಎಂದರು.
ಅಂಬೇಡ್ಕರ್ ಅವರು ವಿದೇಶದಿಂದ ಹಿಂದಿರುಗಿ ವಕೀಲಿ ವೃತ್ತಿ ಮಾಡಲು ಬಯಸಿದಾಗ ಅವರಿಗೆ ಪರವಾನಗಿ ನೀಡಲಿಲ್ಲ. ಕರ್ನಾಟಕದ ಸಿದ್ದಪ್ಪ ಕಂಬಳಿ ಅವರು ಅಂಬೇಡ್ಕರ್ ಅವರನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಿದರು. ಅಂಬೇಡ್ಕರ್ ಜೀವಿತಾವಧಿಯಲ್ಲಿ ಕಾಂಗ್ರೆಸ್ ಹಲವು ಬಾರಿ ಅವರನ್ನು ಅವಮಾನಿಸಿದೆ. ಅಂಬೇಡ್ಕರ್ ಸಿದ್ಧಾಂತಕ್ಕೂ ಕಾಂಗ್ರೆಸ್ಸಿನ ತತ್ತ್ವಗಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಂಬೇಡ್ಕರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಕಾಂಗ್ರೆಸ್ ಈಗ ತಾನು ಮಾಡಿದ ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ಸಿನ ನೈತಿಕ ಅಧಃಪತನ ಶುರುವಾಗಿದೆ ಎಂದು ದೂರಿದರು.
'ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದ್ದು ಬಿಜೆಪಿ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ಪವಿತ್ರ ಗ್ರಂಥವೆಂದು ಪರಿಗಣಿಸುತ್ತಾರೆ. ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅದನ್ನು ತಿದ್ದುಪಡಿ ಮಾಡುವ ಮೂಲಕ ಎಲ್ಲರಿಗೂ ನ್ಯಾಯವನ್ನು ಖಾತ್ರಿಪಡಿಸುವ ಕೆಲಸ ಮಾಡಿದ್ದಾರೆ. ಸಂವಿಧಾನವನ್ನು ರಕ್ಷಿಸುವುದು ಬಿಜೆಪಿಯ ಕರ್ತವ್ಯವಾಗಿದೆ. ಪ್ರಚಾರವು ಅಧಿಕಾರವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ, ಆದರೆ ಅದು ಆಗುವುದಿಲ್ಲ' ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕಾ ಗಾಂಧಿ ಅವರನ್ನು ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಸಿರುವುದು ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಿಜೆಪಿ ಸಂಸದ ಗೋವಿಂದ ಕಾರಜೋಳ, ಕಾಂಗ್ರೆಸ್ ಸ್ವಾರ್ಥಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ಸಂವಿಧಾನವನ್ನು 75 ಬಾರಿ ತಿದ್ದುಪಡಿ ಮಾಡಿದೆ. ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 14 ಬಾರಿ ಮತ್ತು ಮೋದಿ ಎಂಟು ಬಾರಿ ತಿದ್ದುಪಡಿ ಮಾಡಿದ್ದಾರೆ. ವಾಜಪೇಯಿ ದಲಿತರಿಗೆ ಉದ್ಯೋಗ ಮೀಸಲಾತಿಯನ್ನು ಹೆಚ್ಚಿಸಲು ಶ್ರಮಿಸಿದರು ಮತ್ತು ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನತೆ ತರಲು ತಿದ್ದುಪಡಿ ಮಾಡಿದರು ಎಂದು ತಿಳಿಸಿದರು.
ಮಾಜಿ ಸಚಿವ ಬಿಸಿ ಪಾಟೀಲ್ ಮಾತನಾಡಿ, 'ಅಂಬೇಡ್ಕರ್ ನಿಧನರಾದಾಗ ಅವರ ಸ್ಮಾರಕಕ್ಕೆ ಜಾಗವನ್ನು ಕಾಂಗ್ರೆಸ್ ಮಂಜೂರು ಮಾಡಲಿಲ್ಲ. ಈಗಿರುವ ಕಾಂಗ್ರೆಸ್‌ಗೆ ನಕಲಿ. ಸಂವಿಧಾನವನ್ನು ಗೌರವಿಸುವ ಏಕೈಕ ಪಕ್ಷ ಬಿಜೆಪಿ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ ಮತ್ತು ಈಗ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ. ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಈಗಿನ ಕಾಂಗ್ರೆಸ್‌ಗಿಂತ ಭಿನ್ನವಾಗಿತ್ತು. ಈಗಿರುವುದು ಅದರ ನಕಲಿ ಆವೃತ್ತಿಯಾಗಿದೆ' ಎಂದು ಅವರು ಹೇಳಿದರು.
Advertisement