
ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿದ್ದು, ನನ್ನ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇಡೀ ಪಕ್ಷ ಒಗ್ಗಟ್ಟಿನಿಂದ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಡಿಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ಒಟ್ಟಿಗೆ ಹೀಗೆ ಹೇಗೆ ನಿಂತು ಮಾತನಾಡುತ್ತೇವೆ? ಒಡಕು ಮೂಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಅಲ್ಲ. ಬಿಜೆಪಿಯಲ್ಲಿ. ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಅವರಲ್ಲಿ ಎರಡು, ಮೂರು ಮತ್ತು ನಾಲ್ಕು ಬಣಗಳಿವೆ. ಎಲ್ಲಾ ಬಣಗಳು ಒಳಜಗಳದಲ್ಲಿ ತೊಡಗಿವೆ. ನಮ್ಮ ಸರ್ಕಾರ ಸ್ಥಿರವಾಗಿದ್ದು, 2028 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬರ ಪೀಡಿತ ಚಿತ್ರದುರ್ಗ ಜಿಲ್ಲೆಗೆ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಯೋನೆಗಾಗಿ ಈ ವರ್ಷ ರಾಜ್ಯ ಸರ್ಕಾರ 800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಯೋಜನೆಯ ಕಾಮಗಾರಿ ನಿಂತಿಲ್ಲ ಎಂದರು.
2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 5,300 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಿತ್ತು. ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಅದೇ ವರದಿಯಾಗಿದೆ, ಆದರೆ ಇದುವರೆಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.
ನಾನಷ್ಟೇ ಅಲ್ಲ, ಡಿಸಿಎಂ ಕೂಡ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಗತ್ಯ ಹಣ ಬಿಡುಗಡೆ ಮಾಡುವಂತೆ ಹಾಗೂ ನಬಾರ್ಡ್‌ಗೆ ಹಣ ನೀಡುವಂತೆ ಒತ್ತಾಯಿಸಿದರೂ ಕೇಂದ್ರ ನಮ್ಮ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಈ ಬಾರಿಯಾದರೂ ಬಜೆಟ್‌ನಲ್ಲಿ ಹಣವನ್ನು ಮರು ಘೋಷಿಸಿ ಹಣ ಬಿಡುಗಡೆ ಮಾಡಬೇಕು, ಈ ಕುರಿತುಕೇಂದ್ರಕ್ಕೆ ಪತ್ರ ಬರೆಯುತ್ತೇನೆಂದು ಹೇಳಿದರು.
Advertisement