
ಮೈಸೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿರೋಧಗಳ ಪಕ್ಷಗಳ ಅಸ್ಥಿರಗೊಳಿಸುವ ಯತ್ನ ನಡೆಸುತ್ತಿದ್ದು, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಿಜೆಪಿ ತೊರೆಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಜನತೆ ಕಾಂಗ್ರೆಸ್‌ಗೆ ಜನಾದೇಶ ನೀಡಿದೆ. ಆದರೆ, ಆಡಳಿತ ಪಕ್ಷವು ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಯತ್ನದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ನಾವೆಲ್ಲರೂ ಒಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇರುತ್ತಾರೆ. ಯಾರಿಗೋಸ್ಕರ ಒಂದಾಗಿದ್ದಾರೆ? ಅಧಿಕಾರಕ್ಕೆ ಮತ್ತು ಕುರ್ಚಿಗಾಗಿ ಮಾತ್ರವೇ ಒಂದಾಗುತ್ತಿದ್ದಾರೆ. ಕುರ್ಚಿ ಕೊಟ್ಟ ಜನರಿಗಾಗಿ ಏನು ಮಾಡುತ್ತಿದ್ದಾರೆ? ಏನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ಫೈನಾನ್ಸ್ ಕಂಪನಿಗಳ ಹಾವಳಿ ಬಗ್ಗೆ ಒಂದು ತಿಂಗಳಿನಿಂದಲೂ ಚರ್ಚೆಯಾಗುತ್ತಿದೆ. ಅಲ್ಲಲ್ಲಿ ಬೇಸತ್ತ ಜನರು ಮನೆ– ಹಳ್ಳಿಗಳನ್ನೇ ಬಿಟ್ಟು ಹೋಗುತ್ತಿದ್ದಾರೆ. ಆದರೆ, ಇದರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡಲೇ ಇಲ್ಲ. ನೊಂದವರಿಗೆ ಮಾನಸಿಕ ಸ್ಥೈರ್ಯವನ್ನೂ ತುಂಬಲಿಲ್ಲ. ಫೈನಾನ್ಸ್‌ಗಳು ಪರವಾನಗಿ ಇಲ್ಲದೇ ಅಣಬೆ ರೀತಿ ಹುಟ್ಟಿಕೊಂಡಿವೆ. ಕಿರುಕುಳದಿಂದ ಹಲವರು ಪ್ರಾಣ ಕಳೆದುಕೊಂಡ ಮೇಲೆ, ಊರು ಬಿಟ್ಟ ಹೋದ ಮೇಲೆ ಸಭೆ ನಡೆಸಿ ಚರ್ಚಿಸಿದರೇನು ಪ್ರಯೋಜನ ಎಂದು ಕಿಡಿಕಾರಿದರು.
ಬಾಣಂತಿಯರು ಸಾಯುತ್ತಿದ್ದರೂ, ಕಳಪೆ ಔಷಧಿ ಪೂರೈಕೆ ಆಗುತ್ತಿದ್ದರೂ ಈ ಸರ್ಕಾರದಲ್ಲಿ ಕೇವಲ ಕುರ್ಚಿಗಾಗಿ ಚರ್ಚೆಯಾಗುತ್ತಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎನ್ನುವುದು ಮುಖ್ಯವಲ್ಲ. ಜನರಿಗೆ ಏನು ಮಾಡಿದಿರಿ ಎಂಬುದು ಮುಖ್ಯ. ಇನ್ನೂ 5 ವರ್ಷ ನೀವೇ ಅಧಿಕಾರದಲ್ಲಿರಿ; ಮುಂದೆಯೂ ನೀವೇ ಬನ್ನಿ. ಆದರೆ, ಜನರ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡಿ. ಬಡವರನ್ನು ಆರ್ಥಿಕವಾಗಿ ಬೆಳೆಸುತ್ತೇವೆ ಎನ್ನುತ್ತೀರಲ್ಲಾ, ಇದೇನಾ ಅದು? ಎಂದು ಕೇಳಿದರು.
ಶ್ರೀರಾಮುಲು-ಗಾಲಿ ಜನಾರ್ದನರೆಡ್ಡಿ ಹಗ್ಗಜಗ್ಗಾಟ ಕುರಿತು ಪ್ರತಿಕ್ರಿಯಿಸಿ, ಬಿ.ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವುದಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ಊಹೆಯಷ್ಟೆ. ಜನಾರ್ಧನ ರೆಡ್ಡಿ–ಶ್ರೀರಾಮಲು ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು; ಅಣ್ಣ–ತಮ್ಮನಂತೆ ಚೆನ್ನಾಗಿದ್ದವರು. ಇಬ್ಬರ ನಡುವಿನ ವೈಮನ್ಲು ಬಿಜೆಪಿಯ ಆಂತರಿಕ ವಿಚಾರ. ಇದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಅವರಿಬ್ಬರ ನಡುವಿನ ಜಗಳವನ್ನು ಬಿಜೆಪಿಯ ನಾಯಕರೇ ಬಿಡಿಸಬೇಕು ಎಂದು ಹೇಳಿದರು.
‘ನನ್ನ ಮೇಲೆ ಕ್ರಮ ಕೈಗೊಳ್ಳಲು ಧಮ್ ಬೇಕು’ ಎಂಬ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ದೊಡ್ಡವರಿದ್ದಾರೆ. ಪಕ್ಷದಲ್ಲಿ ತೀರ್ಮಾನಿಸಿ, ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದರು.
Advertisement