
ಮೈಸೂರು: ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲು ನಿರ್ಧರಿಸಿದರೆ ಸ್ವಾಗತ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪುವ ಎಲ್ಲರಿಗೂ ಸ್ವಾಗತವಿದೆ. ಆದರೂ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಿದರು.
ಸಂಸತ್ ಚುನಾವಣೆ ಸಮಯದಲ್ಲೇ ಶ್ರೀರಾಮುಲು ಕಾಂಗ್ರೆಸ್‌ಗೆ ಬರುತ್ತಾರೆಂದು ಚರ್ಚೆ ಆಗಿತ್ತು. ಆ ಸಮಯದಲ್ಲಿ ಅವರು ಬರಲಿಲ್ಲ. ಈಗ ಕಾಂಗ್ರೆಸ್‌ಗೆ ಬರುತ್ತಾರೋ, ಇಲ್ಲವೋ ಗೊತ್ತಿಲ್ಲ. ಒಮ್ಮೆ ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ ತಿಳಿಸಿದರು.
ಜನಾರ್ದನ ರೆಡ್ಡಿ- ಶ್ರೀರಾಮುಲು ಜಗಳ ಅವರ ವೈಯಕ್ತಿಕ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷದ ತತ್ವ- ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಬಂದರೂ ಸಂತೋಷ. ಅದರಂತೆ ಶ್ರೀರಾಮುಲು ಬಂದರೆ ಅಭ್ಯಂತರವಿಲ್ಲ ಎಂದರು.
ಕಾಂಗ್ರೆಸ್‌ಗೆ ಬೇರೆ ಬೇರೆ ಪಕ್ಷಗಳಿಂದ ಒಂದಷ್ಟು ಜನ ಶಾಸಕರು ಬರುತ್ತಾರೆಂದು ಹೇಳುತ್ತಿದ್ದಾರೆ. ಯಾರೇ ಬಂದರೂ ನಮಗೇನು ಬೇಜಾರಿಲ್ಲ. ಬರದಿದ್ದವರನ್ನು ಬರಲೇಬೇಕೆಂದು ಎಳೆದುಕೊಂಡು ಬರುವ ಪರಿಸ್ಥಿತಿ ನಮಗಿಲ್ಲ. ಏಕೆಂದರೆ, 138 ಶಾಸಕರು ಇರುವುದರಿಂದ ನಮಗೆ ಸಮಸ್ಯೆ ಇಲ್ಲ. ನಮ್ಮ ಪಕ್ಷಕ್ಕೆ ಬರುತ್ತೇವೆ ಎನ್ನುವವರಿಗೆ ಮೊದಲು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡಬೇಕು ಎಂದು ಹೇಳಿದ್ದೇವೆಂದು ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ನವರು ನೀಡುತ್ತಿರುವ ಕಿರುಕುಳದ ಕುರಿತ ಪ್ರಶ್ನೆಗೆ ಉತ್ತರಿಸಿ, ಮೈಕ್ರೋ ಫೈನಾನ್ಸ್ ಕಿರುಕುಳದ ಸಂಬಂಧ ಕಠಿಣ ಕಾನೂನು ಕ್ರಮಕ್ಕೆ ಚಿಂತನೆ ನಡೆಸಲಾಗುತ್ತಿದೆ. ಜನರು ಕೂಡ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಬಾಗಿಲು ತಟ್ಟುವ ಬದಲು ಪಿಎಲ್‌ಡಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಿಂದ `5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಪಡೆಯಬೇಕು ಎಂದು ಮನವಿ ಮಾಡಿದರು.
Advertisement