
ಮೈಸೂರು: ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ,. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 6ನೇ ಗ್ಯಾರಂಟಿ ಗೂಂಡಾ ಭಾಗ್ಯ ಜಾರಿಗೆ ತಂದಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ರೈತರಿಗೆ ಬ್ಯಾಂಕ್‌ಗಳು ಸಾಲ ನೀಡದ ಕಾರಣ, ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಅವಲಂಬಿಸುವಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರನೇ ಗ್ಯಾರಂಟಿ ‘ಗೂಂಡಾ ಭಾಗ್ಯ’ ಪರಿಚಯಿಸಿರುವುದರಿಂದ, ಗೂಂಡಾಗಳು ಅತ್ಯಂತ ಸಮರ್ಪಣಾ ಭಾವದಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಮುಡಾ ಹಗರಣ ಕುರಿತು ಮಾತನಾಡಿ, 1,500 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವುದರೊಂದಿಗೆ ಇದು ಅತಿದೊಡ್ಡ ಹಗರಣವಾಗಿದೆ. ಹಗರಣದ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಧರಣಿ ನಡೆಸಿದ್ದು, ಲೋಕಾಯುಕ್ತರು ಮುಖ್ಯಮಂತ್ರಿ ಪರವಾಗಿ ವರದಿ ನೀಡುತ್ತಿರುವುದರಿಂದ ತನಿಖೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿದರು. ಇದೇ ವೇಳೆ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಗಾಲಿ ಜನಾರ್ದನರೆಡ್ಡಿ ಮತ್ತು ಬಿ ಶ್ರೀರಾಮುಲು ಅವರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿ, ಇಬ್ಬರೂ ನಾಯಕರ ಜೊತೆ ಮಾತನಾಡಿದ್ದು, ಮನಸ್ತಾಪಗಳು ಶೀಘ್ರದಲ್ಲೇ ದೂರಾಗಲಿದೆ. ಇನ್ನೆರಡು ದಿನಗಳಲ್ಲಿ ಎಲ್ಲವನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಖೋ ಖೋ ವಿಶ್ವಕಪ್ ವಿಜೇತರಿಂದ ಸರ್ಕಾರಕ್ಕೆ ಬಹುಮಾನ ವಾಪಸ್ ಕುರಿತು ಮಾತನಾಡಿ, ಈ ಸರ್ಕಾರ ಪಾಪರ್ ಆಗಿದೆ. ಪೇಪರ್ ತೆಗೆದುಕೊಳ್ಳಲು ಕೂಡ ಕಾಸಿಲ್ಲ. ವಾಪಸ್ ಕೊಟ್ಟರೆ ಅದೂ ಸಿಗುವುದಿಲ್ಲ. ಇತರೆ ರಾಜ್ಯಗಳು ಆರ್ಥಿಕವಾಗಿ ಸದೃಢವಾಗಿವೆ. ಅಲ್ಲಿ ಹೆಚ್ಚಿನ ಬಹುಮಾನ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ದುಡ್ಡು ಕೊಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಅನುದಾನ ತಂದಿದ್ದೀರಾ? ಈ ಬಾರಿಯ ಬಜೆಟ್ ಕೂಡ ದಿವಾಳಿ ಬಜೆಟ್ ಆಗಿರಲಿದೆ. ಸಿದ್ದರಾಮಯ್ಯ ಪರವಾಗಿ ನಾನು ನಿಮಗೆ ಮನವಿ ಮಾಡುತ್ತೇನೆ, ದಯಮಾಡಿ ಬಹುಮಾನ ತೆಗೆದುಕೊಳ್ಳಿ ಎಂದರು.
Advertisement