
ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿರುವ ರಾಜ್ಯ ಸರ್ಕಾರದ ಸುರಂಗ ರಸ್ತೆ ಯೋಜನೆಗೆ ಬಿಜೆಪಿ ನಾಯಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಟನಲ್ ರೋಡ್ ಗಾಗಿ ತೆರಿಗೆದಾರರ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ ಎಂದು ಪ್ರಶ್ನಿಸಿದ ಬಿಜೆಪಿ ಸಂಸದ, ಇದು ಸಂಪೂರ್ಣ "ಅವೈಜ್ಞಾನಿಕ"ವಾಗಿದ್ದು, ಯೋಜನೆಯ ವಿನ್ಯಾಸ ಕಳಪೆಯಾಗಿದೆ ಮತ್ತು ಬೆಂಗಳೂರಿನ ಸಂಚಾರ ದಟ್ಟಣೆ ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಕೆಆರ್ ಪುರಂ ಮತ್ತು ನಾಯಂಡಹಳ್ಳಿ ನಡುವಿನ 28 ಕಿ.ಮೀ ಉದ್ದದ ಪ್ರಸ್ತಾವಿತ ಎರಡನೇ ಸುರಂಗ ರಸ್ತೆ ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ರಾಜ್ಯ ಸರ್ಕಾರ ಬಿಡ್‌ಗಳನ್ನು ಆಹ್ವಾನಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆಯ ಕಳಪೆ ಡಿಪಿಆರ್ ಮತ್ತು ಕಾರ್ಯಸಾಧ್ಯತಾ ವರದಿಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಹೀಗಿದ್ದರೂ ಸರ್ಕಾರ ವಿಚಲಿತವಾಗದೇ ಇದೀಗ ಕೆಆರ್ ಪುರ - ನಾಯಂಡಹಳ್ಳಿಗೆ ಡಿಪಿಆರ್ ತಯಾರಿಸಲು ಟೆಂಡರ್ ಕರೆದಿದೆ ಎಂದು ಹೇಳಿದ್ದಾರೆ.
ಇದು ತೆರಿಗೆದಾರರ ಹಣ ವ್ಯರ್ಥ ಮಾಡುವ ಮತ್ತೊಂದು ಕಸರತ್ತು
ನಗರದಲ್ಲಿ ಸುರಂಗ ರಸ್ತೆ ಯೋಜನೆಯು ಒಂದು ಕೆಟ್ಟ ನಿರ್ಧಾರ. ಸರಿಯಾಗಿ ಯೋಚಿಸಲಾಗಿಲ್ಲ ಮತ್ತು ಬೆಂಗಳೂರಿನ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಈ ಯೋಜನೆಗೆ ಕೈ ಹಾಕಿದರೂ ಸಹಿತ ಈ ಕಾರ್ಯಸಾಧುವಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಬಿಎಂಟಿಸಿ ಫ್ಲೀಟ್ ಅನ್ನು 15,000 ಬಸ್‌ಗಳಿಗೆ ವಿಸ್ತರಿಸುವಂತಹ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಬೆಂಗಳೂರಿನ ಮಾಸ್ಟರ್ ಪ್ಲಾನ್ 2031 ಅನ್ನು ಡಿಪಿಆರ್ ನಿರ್ಲಕ್ಷಿಸಿದೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
ಇಂತದ್ದೆ ತಪ್ಪುಗಳು, ನಿರ್ಲಕ್ಷ್ಯಗಳಿಂದಲೇ ನಮ್ಮ ಮೆಟ್ರೋ ಹಂತಗಳು 2ಬಿ ಮತ್ತು 3ಎ ಕಾಮಗಾರಿಯಲ್ಲಿ ನಿರ್ಣಾಯಕವಾಗಿರುವ ಸುರಂಗ ರಸ್ತೆ ಜೋಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಮೆಟ್ರೋ ಸುರಂಗ ಯೋಜನೆಗಳು 61 ತಿಂಗಳ ಗಡುವು ಮೀರಿವೆ. ಕಾಲಮಿತಿಯಲ್ಲಿ ನಿರ್ಮಾಣ ಆಗದ ಹಿನ್ನೆಲೆಯಲ್ಲಿ ಕಾಮಗಾರಿಗೆಂದು ಅಗೆದ ರಸ್ತೆಗಳು ಇಕ್ಕಟ್ಟಾಗಿವೆ. ಸುಗಮ ಸಂಚಾರಕ್ಕೆ ಸಾಕಷ್ಟು ಅಡಚಣೆಗಳು ಆಗುತ್ತಿದೆ ಎಂದು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.
Advertisement