
ಬೆಂಗಳೂರು: ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಸಾಲ ನೀಡ ಕಾರಣ ಜನರು ಮೈಕ್ರೋ ಫೈನಾನ್ಸ್ ಮೊರೆ ಹೋಗುವಂತಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೋಮವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ನಿಗಮ-ಮಂಡಳಿಗಳಿಗೆ ಸರ್ಕಾರ ಒಟ್ಟು 1,700 ಕೋಟಿ ರೂ.ಗಳನ್ನು ನೀಡಬೇಕು, ಆದರೆ, ಕೇವಲ 643 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅಂದರೆ ಎಲ್ಲಾ ನಿಗಮ-ಮಂಡಗಳಲ್ಲಿ 1,055 ಕೋಟಿ ರೂ. ಕೊರತೆಯಿದೆ. ಈ ಹಣವನ್ನು ಜನರಿಗೆ ಸಾಲವಾಗಿ ನೀಡಬಹುದಿತ್ತು. ಇದೇ ವೇಳೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಧ್ಯಪ್ರವೇಶಿಸಿದ್ದು, ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಕಲ್ಯಾಣ ಸೇರಿದಂತೆ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಸಾಲ ವಿತರಿಸಲು ಸರ್ಕಾರ ವಿಫಲವಾಗಿದೆ. ಇದರಿಂದ ಜನರು ಮೈಕ್ರೋ ಫೈನಾನ್ಸ್ ಸಂಸ್ಥೆಗಳತ್ತ ಮುಖಮಾಡಿ ಸಾಲದ ಸುಳಿಗೆ ಸಿಲುಕಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯವು ಆತ್ಮಹತ್ಯೆಯ ರಾಜಧಾನಿಯಾಗಿ ಮಾರ್ಪಟ್ಟಿದೆ. ಈ ಸರ್ಕಾರ ಮಾಡಿದ ಪಾಪಗಳಿಂದ ಜನರು ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯುತ್ತಿದ್ದಾರೆ, ಸರ್ಕಾರವೇ ಸಾಲ ನೀಡಿದ್ದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಹೋಲಿಕೆ ಮಾಡಿ ಅಂಕಿಅಂಶಗಳನ್ನು ಮುಂದಿಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಗಂಗಾ ಕಲ್ಯಾಣ ಯೋಜನೆಗೆ 2022-23ರಲ್ಲಿ ಬಿಜೆಪಿ ಸರಕಾರ 60 ಕೋಟಿ ನೀಡಿದ್ದರೆ, ಕಾಂಗ್ರೆಸ್ ಸರಕಾರ 2024-25ರಲ್ಲಿ ಕೇವಲ 40 ಕೋಟಿ ರೂ ಬಿಡುಗಡೆ ಮಾಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್ 60 ಕೋಟಿ ರೂ. ನೀಡಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ ಎಂದು ತಿಳಿಸಿದರು.
ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಹಣ ಫ್ರೀಜ್ ಆಗಿದೆ. ನಿಗಮಗಳಿಗೆ 1,700 ಕೋಟಿ ರೂ. ನೀಡಬೇಕಿದ್ದು, 643 ಕೋಟಿ ರೂ. ನೀಡಲಾಗಿದೆ. ಅಂದರೆ ಎಲ್ಲ ನಿಗಮಗಳಿಗೆ ಒಟ್ಟು 1,055 ಕೋಟಿ ರೂ. ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್‌ಗಳು ನೀಡುತ್ತಿವೆ ಎಂದರು.
ಪ್ರತಿ ಬಜೆಟ್‌ನಲ್ಲೂ ಅನುದಾನ ಶೇ.20 ರಷ್ಟು ಹೆಚ್ಚಾಗಬೇಕು. 2022-23 ರಲ್ಲಿ ಬಿಜೆಪಿ ಸರ್ಕಾರ ಕೃಷಿ ಇಲಾಖೆಗೆ 7,288 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರ್ಕಾರ 5,035 ಕೋಟಿ ರೂ. ನೀಡಿದೆ. ಅಂದರೆ 2,253 ಕೋಟಿ ರೂ. ಕೊರತೆಯಾಗಿದೆ. ಇದು ರೈತರ ಬದುಕಿನ ಮೇಲೆ ಪರಿಣಾಮ ಬೀರಿದೆ. ತೋಟಗಾರಿಕಾ ಇಲಾಖೆಗೆ ಬಿಜೆಪಿ 1,374 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 1,207 ಕೋಟಿ ರೂ. ನೀಡಿದೆ.
ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಸಹಕಾರಿ ಎಲ್ಲ ಸೇರಿ ಬಿಜೆಪಿ 15,383 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 14,768 ಕೋಟಿ ರೂ. ನೀಡಿದೆ. ಇದರಿಂದ 614 ಕೋಟಿ ರೂ. ಕೊರತೆಯಾಗಿದೆ. ಕಂದಾಯ ಇಲಾಖೆಗೆ ಬಿಜೆಪಿ 1534 ಕೋಟಿ ರೂ.ನೀಡಿದರೆ, ಕಾಂಗ್ರೆಸ್‌ನಿಂದ 940 ಕೋಟಿ ರೂ. ನೀಡಲಾಗಿದೆ. 594 ಕೋಟಿ ರೂ. ಕೊರತೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಬಿಜೆಪಿ 12,410 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ನಿಂದ 9,699 ಕೋಟಿ ರೂ. ನೀಡಲಾಗಿದೆ. 2,710 ಕೋಟಿ ರೂ. ಕೊರತೆಯಾಗಿದೆ. ನೀರಾವರಿಗೆ ಬಿಜೆಪಿ 19,610 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 16,834 ಕೋಟಿ ರೂ. ನೀಡಿದೆ. ಇದರಿಂದ 2755 ಕೋಟಿ ರೂ. ಕೊರತೆಯಾಗಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್‌ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಕಾಂಗ್ರೆಸ್ ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಬಡ ಜನರು ಸಾಲ ಮಾಡಿದರೆ ಮನೆ ಬಿಟ್ಟು ಹೊರಡಬೇಕಾಗಿದೆ. ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಸಾಲ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ನಿಗಮಗಳ ಮೂಲಕ ಸಾಲ ನೀಡದೆ, ಜನರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳ ಮೊರೆ ಹೋಗಿದ್ದಾರೆ ಎಂದು ದೂರಿದರು.
ಮೈಕ್ರೋ ಫೈನಾನ್ಸ್‌ನಲ್ಲಿ 10 ಜನರ ಗುಂಪು ರಚಿಸಿ, ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡುತ್ತಾರೆ. ಒಬ್ಬರಿಗೆ ಉಳಿದವರು ಶೂರಿಟಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. 50 ಸಾವಿರ ರೂ. ಸಾಲ ಪಡೆದರೆ 67 ಸಾವಿರ ರೂ. ವಾಪಸ್ ನೀಡಬೇಕು. ಎರಡು ತಿಂಗಳು ಕಟ್ಟಲಿಲ್ಲವೆಂದರೆ ರೌಡಿಗಳು ಮನೆಗೆ ಹೋಗಿ ಗಲಾಟೆ ಮಾಡುತ್ತಾರೆ. ಅನೇಕ ಹಳ್ಳಿಗಳಲ್ಲಿ ಜನರು ಮನೆ ಬಿಟ್ಟು ವಲಸೆ ಹೋಗಿದ್ದಾರೆ ಎಂದರು.
ಕೋಟೆ ಲೂಟಿಯಾದ ನಂತರ ಬಾಗಿಲು ಹಾಕಿದರು ಎಂಬಂತೆ, ಸಿಎಂ ಸಿದ್ದರಾಮಯ್ಯ ಈಗ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನೋಟಿಸ್ ಕೊಡದೆ ಜನರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಇಂತಹ ಸಮಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಪೊಲೀಸರು ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಕಂಟ್ರೋಲ್ ರೂಮ್ ರೂಪಿಸಿದರೂ ಅದರಿಂದ ಜನರಿಗೆ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಸಾಲ ಮನ್ನಾ ಬಗ್ಗೆ ಹೇಳಿದ್ದರಿಂದ ಡಿಸಿಸಿ ಬ್ಯಾಂಕ್‌ಗಳಿಗೆ ನಷ್ಟವಾಗಿದೆ. ಸಾಲ ಪಡೆದವರು ಕಾಂಗ್ರೆಸ್ ಸರ್ಕಾರವನ್ನು ನಂಬಿಕೊಂಡು ಕೂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತಾರೆಂದು ಪ್ರಧಾನಿ ಮೋದಿ ಹೇಳಿದ್ದು, ಈಗ ನಿಜವಾಗಿದೆ. ಗೃಹಲಕ್ಷ್ಮಿಯ ಹಣ ಮಹಿಳೆಯರಿಗೆ ನಿಜವಾಗಿಯೂ ಸಿಕ್ಕಿದ್ದರೆ ಏಕೆ ಮೈಕ್ರೋ ಫೈನಾನ್ಸ್‌ಗೆ ಹೋಗುತ್ತಾರೆ ಎಂದು ಪ್ರಶ್ನೆ ಮಾಡಿದರು.
Advertisement