
ಬೆಂಗಳೂರು: ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಕಾಂಗ್ರೆಸ್ ಪಕ್ಷದ ಶಾಸಕರು ಕುಂದುಕೊರತೆಗಳನ್ನು ಆಲಿಸುವ ಕಸರತ್ತನ್ನು ಸೋಮವಾರ ಪ್ರಾರಂಭಿಸಿದ್ದು, ಈ ನಡುವಲ್ಲೇ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವಂತೆ ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕತೆ ಬರಲು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಹಾಯ ಮಾಡಿದ್ದಾರೆ. ಅವರನ್ನು ಸಿಎಂ ಹುದ್ದೆಗೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಶಾಸಕ ರಾಜು ಕಾಗೆ ಸೇರಿದಂತೆ ಇತರರು ಮಂಗಳವಾರ ಸುರ್ಜೆವಾಲಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸೋಮವಾರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಸುರ್ಜೆವಾಲಾ ಅವರನ್ನು ಬೀದರ್ ಜಿಲ್ಲೆಯ ನಾಯಕರಾದ ಮಾಜಿ ಶಾಸಕರು ರಾಜಶೇಖರ್ ಪಾಟೀಲ್ ಮತ್ತು ಅರವಿಂದ್ ಕುಮಾರ್ ಅರಳಿ ಅವರು ಭೇಟಿ ಮಾಡಿದರು.
ಭೇಟಿ ವೇಳೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಾರ್ಯವೈಖರಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವರು ಸಮಯ ಕೇಳಿದರು ಎಂದು ಮೂಲಗಳು ತಿಳಿಸಿವೆ.
Advertisement