
ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ದಿನಬಳಕೆ ವಸ್ತುಗಳಿಗೆ ‘ಝಡ್ ಪ್ಲಸ್ʼ ಭದ್ರತೆ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿಗಳ ಟೋಲ್ ಶುಲ್ಕದಿಂದ ರೈಲು ಪ್ರಯಾಣ ದರದವರೆಗೆ, ಅಡುಗೆ ಅನಿಲ ಸಿಲಿಂಡರ್‌ನಿಂದ ದಿನಬಳಕೆ ವಸ್ತುಗಳವರೆಗೆ ಬೆಲೆ ಏರಿಕೆ ಮಾಡಿ ಜನಸಾಮಾನ್ಯನ ಪರಿಸ್ಥಿತಿಯನ್ನು ಮೋದಿ ಸರ್ಕಾರ ಜರ್ಜರಿತಗೊಳಿಸಿದೆ. ಇದು ಒಂದು ರೀತಿಯ ಕ್ರೂರ ನೀತಿ ಎಂದು ವಾಗ್ದಾಳಿ ನಡೆಸಿದರು.
ರೈಲ್ವೆ ಹಳಿಗಳು, ಹೆದ್ದಾರಿಗಳ ಮೂಲಕ ಮೋದಿ ಸರ್ಕಾರ ದರೋಡೆ ನಡೆಸುತ್ತಿದೆ. ಜನರನ್ನು ಸುಲಿಗೆ ಮಾಡುವ ಷಡ್ಯಂತ್ರವಿದು. ಈ ಕಾರಣಕ್ಕೆ ಬಿಜೆಪಿಯನ್ನು‘ಭಾರತೀಯರ ಜೇಬು ಕತ್ತರಿಸುವ ಪಕ್ಷ’ ಎಂದು ವ್ಯಾಖ್ಯಾನಿಸಬಹುದು ಎಂದು ಟೀಕಿಸಿದರು. ಇದೇ ವೇಳೆ ರೈಲು ಟಿಕೆಟ್ ಏರಿಕೆಯನ್ನು ಕೂಡೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಟೋಲ್ ಶುಲ್ಕ ಹೆಚ್ಚಿಸಿತ್ತು. ಜುಲೈ 1ರಿಂದ ರೈಲು ಟಿಕೆಟ್ ದರಗಳನ್ನು ಹೆಚ್ಚಿಸಿ ಸುಮಾರು ರೂ.700 ಕೋಟಿಯಷ್ಟು ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. ಈಗ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್ ಶುಲ್ಕವನ್ನು ಹೆಚ್ಚಿಸಿ ಬರೆ ಹಾಕಿದೆ. ಬುಲೆಟ್ ಟ್ರೈನ್ ನೀಡುತ್ತೇವೆ ಎಂದಿದ್ದ ಮೋದಿ, ರೈಲುಗಳನ್ನೇ ಮಾಯ ಮಾಡಿದ್ದಾರೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದರು.
2024ರ ಏಪ್ರಿಲ್ 1ರಿಂದ 2025ರ ಮಾರ್ಚ್31ರವರೆಗೆ ರೈಲಿನಲ್ಲಿ ಪ್ರಯಾಣಿಸಿದವರ ಅಂಕಿಅಂಶಗಳನ್ನು ತೆಗೆದುಕೊಂಡರೆ, ಈ ಒಂದು ವರ್ಷದಲ್ಲಿ 715 ಕೋಟಿ ಪ್ರಯಾಣ ದಾಖಲಾಗಿದೆ. 2023-24ರಲ್ಲಿ ನೈರುತ್ಯ ರೈಲ್ವೆಯಲ್ಲಿ 2.48 ಕೋಟಿ ಜನರು ಪ್ರಯಾಣಿಸಿದ್ದಾರೆ. 2023-24ರ ಸಾಲಿನಲ್ಲಿ ರೂ.2.56 ಲಕ್ಷ ಕೋಟಿ ವಹಿವಾಟು ನಡೆಸಿದ್ದು ರೂ.3 ಸಾವಿರ ಕೋಟಿ ನಿವ್ವಳ ಲಾಭ ಮಾಡಿದೆ. ರೈಲು ಅಪಘಾತದಿಂದ ದೇಶದಲ್ಲಿ 2.60 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಹಿರಿಯ ನಾಗರಿಕರಿಗಿದ್ದ ರೈಲು ಟಿಕೆಟ್ ರಿಯಾಯಿತಿಯನ್ನು ಕಿತ್ತುಕೊಳ್ಳಲಾಗಿದೆ. ಬ್ಲಾಂಕೆಟ್ ನೀಡುವುದಕ್ಕೆ ಹೆಚ್ಚುವರಿ ಹಣ ನೀಡಬೇಕಾಗಿದೆ ಎಂದರು.
ಕರ್ನಾಟಕದ ಜನರಿಂದ ಕಳೆದ ಐದು ವರ್ಷಗಳಲ್ಲಿ ಟೋಲ್ ಮೂಲಕ ರೂ,10 ಸಾವಿರ ಕೋಟಿಯನ್ನು ಕೇಂದ್ರ ಸಂಗ್ರಹಿಸಿದೆ. 2024ರಲ್ಲಿ ರೂ,4.86 ಸಾವಿರ ಕೋಟಿ ಟೋಲ್ ಅನ್ನು ಕರ್ನಾಟಕದ ಜನ ತೆತ್ತಿದ್ದಾರೆ. ಹೊಸೂರು ಟೋಲ್ ಪ್ಲಾಜಾದಲ್ಲಿ ಮತ್ತೆ ಕೇಂದ್ರ ಸರ್ಕಾರ ಟೋಲ್ ಬೆಲೆ ಹೆಚ್ಚಳ ಮಾಡಿದೆ. ಟೋಲ್ ಬೂತ್‌ಗಳು ಸಾಕಾಗಲಿಲ್ಲ ಎಂದು ಇದೀಗ ಇಂಧನ, ಎಲ್‌ಪಿಜಿ, ಅಗತ್ಯ ವಸ್ತುಗಳನ್ನು ಏರಿಸಿದೆ.
ಇದು ಹೀಗೆಯೇ ಮುಂದುವರೆದರೆ ಅಗತ್ಯ ವಸ್ತುಗಳಾದ ಈರುಳ್ಳಿ, ಟೊಮೆಟೊ ಮತ್ತು ಬೇಳೆ ಗಳಿಗೂ Z ಪ್ಲಸ್ ಭದ್ರತೆ ಒದಗಿಸಬೇಕಾಗಿ ಬರಬಹುದು ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ ಅವರು, ಕೇಂದ್ರ ಸರ್ಕಾರದ ಲೂಟಿಯ ವಿರುದ್ಧ ಧ್ವನಿಯೆತ್ತಲು ಸಾಧ್ಯವಾಗದಿದ್ದರೆ, ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ. ರಾಜ್ಯವನ್ನೂ ಲೂಟಿ ಮಾಡುತ್ತಿದ್ದರು ಅಧಿಕಾರದಲ್ಲಿದ್ದುಕೊಂಡು ಮೌನ ತಾಳುವುದು ಸಾಧ್ಯವಿಲ್ಲ ಎಂದರು.
ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆಯಲ್ಲಿ ಎಲ್‌ಒಪಿ ಆರ್. ಅಶೋಕ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 4 ಕೋಟಿ ಕನ್ನಡಿಗರಿಗೆ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ಸಾಕಷ್ಟು ಹಣವಿದೆ. ಆದರೆ, ಗ್ಯಾರಂಟಿ ಯೋಜನೆಗಳು ನಿಲ್ಲದ ಹೊರತು ತಮ್ಮ ಬೇಳೆ ಬೇಯುವುದಿಲ್ಲ ಎಂದು ಬಿಜೆಪಿ ನಾಯಕರು 56,000 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತಿದ್ದಾರೆಂದು ಕಿಡಿಕಾರಿದರು.
Advertisement