
ಬೆಂಗಳೂರು: ನಿಮಗೆ ಅಕ್ಕಿ ಬೇಡ, ಇನ್ನೊಂದು ಬೇಡ ಎಂದರೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತೇವೆಂಬ ಕಾಂಗ್ರೆಸ್ಪಕ್ಷದ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ನೀಡಿರುವ ಹೇಳಿಕೆ ಸರ್ಕಾರಕ್ಕೆ ಮುಜುಗರ ತಂದಿದ್ದು, ಈ ನಡುವೆ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಗ್ಯಾರಂಟಿಯಿಂದ ಅಭಿವೃದ್ಧಿಗೆ ತೊಂದರೆ ಆಗಿಲ್ಲವೆಂದು ಬಡಾಯಿ ಕೊಚ್ಚಿಕೊಂಡು ಬರುತ್ತಿದ್ದ ಕಾಂಗ್ರೆಸ್ ಸರ್ಕಾರ ರಾಯರೆಡ್ಡಿ ಹೇಳಿಕೆಗೆ ಏನು ಹೇಳುತ್ತದೆ? ಎಂದು ಪ್ರಶ್ನಿಸಿದೆ.
ಹಳ್ಳಿಗಳಿಗೆ ರಸ್ತೆ ಬೇಕಾ? ಹಾಗಾದ್ರೆ ಗ್ಯಾರಂಟಿ ಬೇಡ ಎಂದು ಬರೆದುಕೊಡಿ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಿಎಂ ಅರ್ಥಿಕ ಸಲಹೆಗಾರರು, ಕಾಂಗ್ರೆಸ್ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ ನೇರವಾಗಿ ಒಪ್ಪಿಕೊಂಡಿದ್ದಾರೆ. ಮಹಾದೇವಪ್ಪನಿಗೂ ಫ್ರೀ, ಕಾಕಾ ಪಾಟೀಲನಿಗೂ ಫ್ರೀ ಎಂದು ಅಬ್ಬರಿಸಿ ಬೊಬ್ಬಿರಿದವರು ಇಂದು ಬಿಲ ಸೇರಿದ್ದಾರೆ.
ಮರ್ಪಕವಾಗಿ ಯಾವ ಗ್ಯಾರಂಟಿಯೂ ರಾಜ್ಯದಲ್ಲಿ ಅನುಷ್ಠಾನವಾಗಿಲ್ಲ, ಅಭಿವೃದ್ಧಿಯಂತೂ ರಾಜ್ಯದ ಜನತೆಗೆ ತಿರುಕನ ಕನಸಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಥಂಡಾ ಹೊಡೆದಿದ್ದಾರೆಂದು ಟೀಕೆ ಮಾಡಿದೆ.
ಏತನ್ಮಧ್ಯೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ರಾಯರೆಡ್ಡಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
'ಬಡ' ಸರ್ಕಾರ ಎಂದು ರಾಯರೆಡ್ಡಿ ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಈ ಸರ್ಕಾರದಲ್ಲಿ ಅಭಿವೃದ್ಧಿಯೇ ಇಲ್ಲ ಎಂದು ರಾಯರೆಡ್ಡಿ ಹೇಳಿದ್ದಾರೆ, 2 ಸಾವಿರ ಬೇಕೋ ರೋಡ್ ಬೇಕೋ ಎಂದಿದ್ದಾರೆ ಅವರು, ಸತ್ಯವನ್ನೇ ಹೇಳಿದ್ದಾರೆ. ನಮ್ಮ ಸರ್ಕಾರ ಬಂದರೆ ಅವರಿಗೆ ಪ್ರಶಸ್ತಿ ಕೊಡುತ್ತೇವೆ, ಸತ್ಯವಾನ್ ರಾಯರೆಡ್ಡಿ ಪ್ರಶಸ್ತಿ ಕೊಡುತ್ತೇವೆ. ಜನರಿಗೆ ಚಿಪ್ಪು ಕೊಟ್ಟು ಹೋಗುವ ಸರ್ಕಾರ ಇದು ಎಂದು ಕಿಡಿಕಾರಿದರು.
Advertisement