
ಹಾಸನ: ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಗುಂಪೊಂದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆಂದು ಸಚಿವ ರಾಜಣ್ಣ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಲ್ಲ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರ ದೊಡ್ಡ ಗುಂಪು ಕಾಂಗ್ರೆಸ್ ಸೇರಲು ಮುಂದಾಗಿದ್ದು, ಈ ಬಗ್ಗೆ ಈಗಲ್ಲ, ಸೂಕ್ತ ಸಮಯದಲ್ಲಿ ವಿವರವಾಗಿ ಮಾಹಿತಿ ನೀಡುತ್ತೇನೆಂದು ಹೇಳಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿ, ಇದೇ ವಿಚಾರವಾಗಿ ಆಗಾಗ್ಗೆ ಚರ್ಚೆಗಳು ಶುರುವಾದಾಗ ಸಿದ್ದರಾಮಯ್ಯ ಸುಮ್ಮನಿದ್ದರು. ಆರಂಭದಲ್ಲಿಯೇ ಅದನ್ನು ಸ್ಪಷ್ಟಪಡಿಸಬಹುದಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುವುದು ಖಚಿತ. ನನ್ನ ಹೇಳಿಕೆಗೆ ಈಗಲು ನಾನು ಬದ್ಧ ಎಂದು ತಿಳಿಸಿದರು.
ಇಜೇ ವೇಳೆ ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಸೂಕ್ತ ರೀತಿಯಲ್ಲಿ ಆಹ್ವಾನಿಸದ ಕೇಂದ್ರ ಸರ್ಕಾರದ ವಿರುದ್ಧವೂ ರಾಜಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆದಾಗ್ಯೂ, ಪಕ್ಷಗಳನ್ನು ಮೀರಿ, ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಕ್ಕಾಗಿ ಕೇಂದ್ರ ಮೇಲ್ಮೈ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಅವರು ಶ್ಲಾಘಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ವಿಶೇಷವಾದ ಅಭಿಮಾನವಿದೆ. ದೇಶದಲ್ಲಿ ಉತ್ತಮ ರಸ್ತೆ ಆಗುತ್ತಿವೆ. ಅವರು ಯಾವುದೇ ಪಕ್ಷ, ಯಾವುದೇ ರಾಜ್ಯ ಎಂದು ತಾರತಮ್ಯ ಮಾಡುವ ವ್ಯಕ್ತಿಯಲ್ಲ ಎಂದು ಹೇಳಿದರು.
ಗಡ್ಕರಿ ಆರೆಸ್ಸೆಸ್‌ನಿಂದ ಬಂದವರು. ಕಟ್ಟಾ ಹಿಂದೂವಾದಿ ಎಂದುಕೊಂಡಿದ್ದೆ, ಅವರ ಸಂದರ್ಶನ ನೋಡಿದ ಮೇಲೆ, ಕಾರ್ಯವೈಖರಿ ನೋಡಿದ ಮೇಲೆ, ನಿಜಕ್ಕೂ ಕೂಡ ಅಭಿವೃದ್ಧಿ ಪರ ಇದ್ದಾರೆ ಎಂದು ನನಗನ್ನಿಸುತ್ತದೆ. ರಾಷ್ಟ್ರದಲ್ಲಿ ರಸ್ತೆ ಅಭಿವೃದ್ಧಿ ಮಾಡುವುದನ್ನು ನೋಡಿದರೆ ನಿಜಕ್ಕೂ ಅವರು ಅಭಿವೃದ್ಧಿ ಪರ ಇರುವ ರಾಜಕಾರಣಿ ಎಂದು ತಿಳಿಸಿದರು.
Advertisement