
ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ, ಇತರೆ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಹಾರದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ 'ಕರ್ನಾಟಕ ಮಾದರಿ'ಯ ಗ್ಯಾರಂಟಿಗಳ ಘೋಷಣೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು 'ಬಿಟ್ಟಿ ಭಾಗ್ಯಗಳು, ರಾಜ್ಯವನ್ನು ದಿವಾಳಿ ಮಾಡುವ ಯೋಜನೆಗಳು, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿಯೇ ನಿಂತು ಹೋಗಿದೆ' ಎಂದು ನಿರಂತರವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಕೊನೆಗೂ ಕರ್ನಾಟಕ ಮಾದರಿಯನ್ನು ಅನುಸರಿಸುವ ಅನಿವಾರ್ಯತೆ ಬಂದಿದೆ. ಗ್ಯಾರಂಟಿ ಸರ್ಕಾರ ನುಡಿದಂತೆ ನಡೆದಿದೆ. ನಮ್ಮ ಜನಪರ ಕಾರ್ಯಕ್ರಮಗಳು ಗೆದ್ದಿವೆ, ವಿಪಕ್ಷಗಳ ಟೀಕೆಗಳು ಸತ್ತಿವೆ ಎಂದು ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂಬಿ.ಪಾಟೀಲ್ ಅವರು, ಕರ್ನಾಟಕದಲ್ಲಿ ನಮ್ಮ ಖಾತರಿ ಯೋಜನೆಗಳನ್ನು ಅಪಹಾಸ್ಯ ಮಾಡುವ ಬಿಜೆಪಿ, ಈಗ ಬಿಹಾರದಲ್ಲಿ ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ. ಮತದಾರರನ್ನು ಓಲೈಸುವ ಪ್ರಯತ್ನದಲ್ಲಿ ಪಕ್ಷದ ದ್ವಂದ್ವತೆಯನ್ನು ಇದು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ" ಎಂದು ಟೀಕಿಸಿದರು.
ಬಿಜೆಪಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸಿತ್ತು, ಆದರೆ, ಮಹಾರಾಷ್ಟ್ರದಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಜಾರಿಗೆ ತಂದರು. ದೆಹಲಿಯಲ್ಲಿಯೂ ಅದೇ ಮಾದರಿಯನ್ನು ಪುನರಾವರ್ತಿಸಿದ್ದಾರೆಂದು ವ್ಯಂಗ್ಯವಾಡಿದರು.
ಯೋಜನೆಗಳನ್ನು ಆರ್ಥಿಕ ಹೊರೆ ಎನ್ನುತ್ತಿರುವ ಬಿಜೆಪಿ, ಇತರೆ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ಜಾರಿಗೆ ತಂದು ನ್ಯಾಯಯುತ ಎನ್ನುತ್ತಿದೆ. ಈ ರೀತಿಯ ದ್ವಿಮುಖ ಧೋರಣೆ ನ್ಯಾಯಸಮ್ಮತವಲ್ಲ ಎಂದರು.
ಡಿಕೆ.ಶಿವಕುಮಾರ್ ಅವರು ಮಾತನಾಡಿ, ಬಡವರ ಬದುಕಿಗಾಗಿ ನಾವು ಗೃಹಲಕ್ಷ್ಮಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಬಳಿಕ ಬಿಜೆಪಿಯವರೇ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಘೋಷಣೆ ಮಾಡಿದ್ದರು, ಈಗ ಬಿಹಾರದಲ್ಲಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಸದಾ ದೇಶಕ್ಕೆ ಮಾದರಿ. ಕಾಂಗ್ರೆಸ್ ಮಾದರಿಯನ್ನು ಇಡೀ ದೇಶವೇ ಅನುಸರಿಸುತ್ತಿದೆ ಎಂದು ತಿಳಿಸಿದ್ದಾರೆ.
Advertisement