
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇರದೇ ಹೋಗಿದ್ದರೆ ಇಡೀ ಭಾರತ ಮುಸ್ಲಿಂ ರಾಷ್ಟ್ರವಾಗಿರುತ್ತಿತ್ತು.. ಸಂಘಟನೆ ಬಗ್ಗೆ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, 'ಕಾಂಗ್ರೆಸ್ ನವರಿಗೆ ಆರ್ ಎಸ್ ಎಸ್ ವಿರುದ್ಧ ದ್ವೇಷ ಕಾರುವುದೇ ಕೆಲಸವಾಗಿದೆ. ಆರ್ ಎಸ್ ಎಸ್ ಮತ್ತು ಮೋದಿ ಬಗ್ಗೆ ಖರ್ಗೆ ಮತ್ತು ರಾಹುಲ್ ತುಂಬಾ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಪ್ರಧಾನಿಯಾಗಬೇಕು ಎನ್ನುವವರು ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು. RSS ಬಗ್ಗೆ ಇವರಿಗೇನು ಗೊತ್ತು? ನೂರು ವರ್ಷಗಳ ಇತಿಹಾಸ ಇರುವ ಶಿಸ್ತಿನ ಸಂಘಟನೆ ಅದು. ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆ ಇರುವುದರಿಂದಲೇ ಹಿಂದೂಗಳು ಒಗ್ಗಟ್ಟಾಗಿದ್ದಾರೆ.
ಒಂದು ವೇಳೆ ಭಾರತ ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆಯೇ ಇಲ್ಲದೇ ಹೋಗಿದ್ದರೆ ಆಗ ಇಡೀ ದೇಶ ಮುಸ್ಲಿಂ ರಾಷ್ಟ್ರವಾಗುತ್ತಿತ್ತು. ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಓಲೈಸುವ ಸಲುವಾಗಿ ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ ಅವರ ಟೀಕೆಗಳಿಂದ ಆರ್ ಎಸ್ ಎಸ್ ಗೆ ಯಾವುದೇ ಅಪಾಯವಿಲ್ಲ.. ಅವರಿಂದ ಸಂಘಟನೆಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಫೇಕ್ ವೋಟ್ ಬಗ್ಗೆ ದಾಖಲೆಗಳಿದ್ದರೆ ಕೋರ್ಟ್ ಗೆ ಹೋಗಿ ಕೇಸ್ ಹಾಕಿ: ಕಾಂಗ್ರೆಸ್ ಗೆ ಸವಾಲು
ಇದೇ ವೇಳೆ ಕಾಂಗ್ರೆಸ್ ನಾಯಕರ ಫೇಕ್ ವೋಟ್ ಆರೋಪಗಳಿಗೆ ತಿರುಗೇಟು ನೀಡಿದ ಶೆಟ್ಟರ್, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಫೇಕ್ ವೋಟ್ ಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಖರ್ಗೆ ಮತ್ತು ರಾಹುಲ್ ಈ ಹಿಂದೆ ಚುನಾವಣೆ ನಡೆದಾಗ ಏಕೆ ಮಾತನಾಡಲಿಲ್ಲ. ಅಂದರೆ ಇವರ ಪಕ್ಷ ಗೆದ್ದರೆ ಆಗ ಫೇಕ್ ವೋಟ್ ಸಮಸ್ಯೆ ಬರುವುದಿಲ್ಲ.. ಸೋತರೆ ಮಾತ್ರ ಬಿಜೆಪಿ ಫೇಕ್ ವೋಟ್ ಗಳಿಂದ ಗೆದ್ದಿದೆ ಎಂದು ಆರೋಪ ಮಾಡುತ್ತಾರೆ. ನಿಮ್ಮ ಬಳಿ ಫೇಕ್ ವೋಟ್ ಗೆ ಸಂಬಂಧಿಸಿದ ಆಧಾರಗಳಿದ್ದರೆ ಕೋರ್ಟ್ ಗೆ ಹೋಗಿ ಕೇಸ್ ಹಾಕಿ.. ಒಂದು ವೇಳೆ ಅದು ನಿಜವೇ ಆಗಿದ್ದರೆ ಕನಿಷ್ಠ ಪಕ್ಷ ಸಂಸತ್ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಸಬಹುದಿತ್ತು ಎಂದು ಶೆಟ್ಟರ್ ಸವಾಲೆಸೆದರು.
ಗಾಂಧಿ ಕುಟುಂಬದಿಂದ ದೇಶಕ್ಕೇನೂ ಲಾಭವಾಗಿಲ್ಲ..
ಇದೇ ವೇಳೆ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದ ಶೆಟ್ಟರ್, ನೆಹರೂ, ಇಂದಿರಾ ಅಥವಾ ಸೋನಿಯಾ ಗಾಂಧಿ ಅವರಿಂದ ದೇಶಕ್ಕೇನೂ ಲಾಭವಾಗಿಲ್ಲ.. ಬದಲಿಗೆ ಈ ಗಾಂದಿ ಕುಟುಂಬದಿಂದ ದೇಶ ಇನ್ನೂ ಹಿಂದುಳಿದೆ. ಅಮೆರಿಕ, ಜಪಾನ್ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಸಾಕಷ್ಟು ಹಿಂದುಳಿದಿದೆ. ದಶಕಗಳ ಕಾಲ ಆಡಳಿತ ಮಾಡಿದ್ದ ಕಾಂಗ್ರೆಸ್ ದೇಶದಲ್ಲಿ ಸರಿಯಾದ ಹೆದ್ದಾರಿಗಳ ನಿರ್ಮಿಸಿಲ್ಲ. ಚೀನಾ, ಮಲೇಷ್ಯಾದಲ್ಲಿ ಅವುಗಳ ಸಮರ್ಥ ನಾಯಕತ್ವದಿಂದ ಆ ದೇಶಗಳಲ್ಲಿ ಸಮಗ್ರ ಅಭಿವೃದ್ದಿಯಾಗಿವೆ. ಆದರೆ ಭಾರತ ಇದಕ್ಕೆ ಹೊರತಾಗಿದೆ. ರಾಹುಲ್ ಗಾಂಧಿ ಹೇಳಿದ್ದು ಸರಿ.. ಅವರಷ್ಟೇ ಅಲ್ಲ.. ಅವರ ನಾಯಕರೆಲ್ಲರೂ ತಪ್ಪು ಮಾಡಿದ್ದಾರೆ ಎಂದು ಶೆಟ್ಟರ್ ತಿರುಗೇಟು ನೀಡಿದರು.
ಸಿಎಂ ಆಗಬೇಕಿದ್ದ ಖರ್ಗೆಯನ್ನು ದೆಹಲಿಗೆ ಕರೆದೊಯ್ದರು
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಆದರೆ ಅಂದು ಇದೇ ಹಿಂದುಳಿದ ವರ್ಗಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿ ದೆಹಲಿಗೆ ಏಕೆ ಕರೆದೊಯ್ದಿರಿ ಎಂದು ಶೆಟ್ಟರ್ ಪ್ರಶ್ನಿಸಿದರು. ಇದು ಒಂದು ನಿದರ್ಶನ ಅಷ್ಟೇ... ಇಂತಹ ಸರಣಿ ತಪ್ಪುಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ದಲಿತರನ್ನು ಓಲೈಸುವ ಕಾರ್ಯದಲ್ಲಿ ಕಾಂಗ್ರೆಸ್ ಇದ್ದು ಅದು ಸಾಧ್ಯವಾಗದ ಮಾತು.. ದಲಿತರಿಗೆ ಕಾಂಗ್ರೆಸ್ ಬುದ್ದಿ ಗೊತ್ತಿದೆ. ಇದೇ ಕಾರಣಕ್ಕೆ ನೀವು ಚುನಾವಣೆಗಳಲ್ಲಿ ಸರಣಿ ಸೋಲು ಕಾಣುತ್ತಿದ್ದೀರಿ ಎಂದರು.
ಗೋವಾ ಸರ್ಕಾರ ಮಹದಾಯಿ ಯೋಜನೆಗೆ ಅಡ್ಡಿಪಡಿಸಬಾರದು
ಅಂತೆಯೇ ಮಹದಾಯಿ ವಿವಾದ ಕುರಿತು ಮಾತನಾಡಿದ ಶೆಟ್ಟರ್, ಮಹದಾಯಿ ವಿವಾದ ಕುರಿತು ಪ್ರಾಧಿಕಾರ ತನ್ನ ತೀರ್ಪು ನೀಡಿದೆ. ಈಗೇನಿದ್ದರೂ ಆ ತೀರ್ಪನ್ನು ಕಾರ್ಯಾಚರಣೆಗೆ ತರಬೇಕು. ಈ ಸಂಬಂಧ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಗೋವಾ ಸರ್ಕಾರ ಈ ಬಗ್ಗೆ ತಕರಾರು ತೆಗೆಯುತ್ತಿದೆ. ಆದರೆ ಅವರಿಗೆ ಈ ಬಗ್ಗೆ ಆಕ್ಷೇಪಗಳಿದ್ದರೆ ಪ್ರಾಧಿಕಾರದ ಮುಂದೆ ಹೋಗಲಿ.. ವಿನಾಕಾರಣ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಶೆಟ್ಟರ್ ಹೇಳಿದರು. ಅಂತೆಯೇ ಕೇಂದ್ರ ಸರ್ಕಾರ ಈ ಬಗ್ಗೆ ಯಾರ ಪರ ಅಥವಾ ವಿರುದ್ಧವೂ ಇಲ್ಲ. ತೀರ್ಪಿನಂತೆ ಕೆಲಸ ಮಾಡುತ್ತಿದೆ ಎಂದರು.
Advertisement