ಮದ್ದೂರು: 1,000 ಕೋಟಿ ರೂ ಮೊತ್ತದ ಯೋಜನೆಗಳಿಗೆ CM-DCM ಚಾಲನೆ; ನಿಮ್ಮ ಕೊಡುಗೆ ಏನು ತಿಳಿಸಿ; BJP-JDS ಸವಾಲು

ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ.
Karnataka Chief Minister Siddaramaiah and Deputy Chief Minister DK Shivakumar
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Updated on

ಮಂಡ್ಯ: ಮದ್ದೂರಿನಲ್ಲಿ 1,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡಿದ್ದು, ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ತವರು ನೆಲದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದರಿಂದ ಹಿಡಿದು ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭಿಸುವವರೆಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಯನ್ನು ಇಬ್ಬರೂ ಪಟ್ಟಿ ಮಾಡಿದರು, ಇದೇ ವೇಳೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆಯೇನು ತಿಳಿಸಿ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸವಾಲು ಹಾಕಿದರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಎಂದಾದರೆ 1,146 ಕೋಟಿ ರೂ.ಗಳ ಕಾಮಗಾರಿಗಳನ್ನು ಹೇಗೆ ಪ್ರಾರಂಭಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಸವಾಲು ಹಾಕಿದರು.

Karnataka Chief Minister Siddaramaiah and Deputy Chief Minister DK Shivakumar
ಸಮಯ ವ್ಯರ್ಥ ಮಾಡದೆ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಿ: JDS ಕಾರ್ಯಕರ್ತರಿಗೆ ಡಿಕೆಶಿ ಕರೆ

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಚುಕ್ತಾ ಮಾಡಿದ್ದು ನಾವು, ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂಪಾಯಿ ಕೊಟ್ಟಿದ್ದು ನಾವು.‌ ಹಾಲು ಉತ್ಪಾದಕರ ಸಂಘದ ಮನವಿಗೆ ಸ್ಪಂದಿಸಿ ಹಾಲು ಉತ್ಪಾದಕರಿಗೆ ಲೀಟರ್ ಗೆ 5 ರೂ. ಸಹಾಯಧನ‌ ಒದಗಿಸಿದ್ದು ನಾವು. ಈಗ ಮತ್ತೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 10 ಕೋಟಿ ರೂ. ಕೊಟ್ಟಿರುವುದು ನಮ್ಮ ಸರ್ಕಾರ. ಮಂಡ್ಯ ಕೃಷಿ ವಿಶ್ವವಿದ್ಯಾಲಯ ಆರಂಭಿಸಿ, ಅಗತ್ಯ ಅನುದಾನ‌ ಕೊಟ್ಟಿರುವುದು ನಾವು. ಇದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ಬದ್ಧತೆ. ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಶಕ್ತಿ ಬಂದಿದೆ. ಪರಿಣಾಮ ಇಡೀ ದೇಶದಲ್ಲಿ ರಾಜ್ಯದ ತಲಾ ಆದಾಯ ನಂಬರ್ ಒನ್ ಆಗಿದೆ.

ಮಂಡ್ಯ ನಗರದಲ್ಲಿ 100 ಅಡಿ ರಸ್ತೆ ಮಾಡಲು ಶಾಸಕ ಉದಯ್ ಅವರ ಬೇಡಿಕೆಗೆ ನಮ್ಮ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶಾಸಕ‌ ಉದಯ್ ಅವರದ್ದು ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತಾರೆ. ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಅಗತ್ಯ ಗೊಬ್ಬರ ಸರಬರಾಜು ಮಾಡುವಂತೆ ಒತ್ತಾಯಿಸಿ ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜೊತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com