ಮೂರ್ನಾಲ್ಕು ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿ ಬಿಡುಗಡೆ; ಚುನಾವಣಾ ಆಯೋಗದ ಅನ್ಯಾಯದ ವಿರುದ್ಧ ಹೋರಾಡಬೇಕು: ಡಿ.ಕೆ ಶಿವಕುಮಾರ್

ಸಧ್ಯ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು.
Dk Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಆಗಸ್ಟ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಭಾರತ್ ಜೋಡೋ ಭವನದಲ್ಲಿ ಬೆಂಗಳೂರು ವಲಯದ ನಾಯಕರು ಹಾಗೂ ಮುಖಂಡರ ಜೊತೆ ಬುಧವಾರ ಪೂರ್ವಭಾವಿ ಸಭೆ ನಡೆಸಿದರು.

ಸಧ್ಯ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು. ಬಿಜೆಪಿಯವರು ಚಿಲುಮೆ ಹಾಗೂ ಇತರೆ ಸಂಸ್ಥೆಗಳ ದುರ್ಬಳಕೆ ಮೂಲಕ ಅಕ್ರಮ ಮಾಡಲು ಮುಂದಾಗಿದ್ದರು.

ಅದನ್ನು ನಾವು ಸಂಪೂರ್ಣವಾಗಿ ತಡೆಯಲು ಆಗಲಿಲ್ಲ. ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಅಕ್ರಮ ಎಸಗಿದ್ದರು. ಇದರಿಂದ ಬೆಂಗಳೂರಿನಲ್ಲಿ ಹೆಚ್ಚುಕಮ್ಮಿ ಆಗಿತ್ತು ಎಂದರು.

Dk Shivakumar
ಗ್ರೇಟರ್ ಬೆಂಗಳೂರಲ್ಲಿ 5 ಪಾಲಿಕೆ ರಚನೆ: ನವೆಂಬರ್ 1 ರಂದು ಅಂತಿಮ ಅಧಿಸೂಚನೆ: ಡಿ.ಕೆ ಶಿವಕುಮಾರ್

ವಿಧಾನಸಭೆ ಚುನಾವಣೆ ನಂತರ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಅವರ ಪುತ್ರ ನನ್ನನ್ನು ಭೇಟಿ ಮಾಡಿ ನನಗೆ ದೊಡ್ಡ ಮಾಹಿತಿ ನೀಡಿದರು. ಅದನ್ನು ನಾವು ಅದನ್ನು ಪರಿಶೀಲನೆ ಮಾಡಿದೆವು. ಅಷ್ಟು ಹೊತ್ತಿಗೆ ತಡವಾದ ಪರಿಣಾಮ ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ.

ನಂತರ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ನಡೆದಿದ್ದು, ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಪರಿಶೀಲನೆ ಮುಂದುವರಿಸಿದ್ದಾರೆ. ಪಕ್ಷದ ವತಿಯಿಂದ ಇದನ್ನು ಅಧ್ಯಯನ ಮಾಡಿ ದೆಹಲಿಗೆ ತಲುಪಿಸಿದ್ದೇವೆ. ಇಲ್ಲಿ ಆಗಿರುವ ಅಕ್ರಮದ ಬಗ್ಗೆ ನಾನು ಬಿಡಿಸಿ ಹೇಳುವುದಿಲ್ಲ. ಈ ವಿಚಾರ ಯಾರ ಬಾಯಿಂದ ಬರಬೇಕೋ ಅವರಿಂದಲೇ ಬರಬೇಕು” ಎಂದು ತಿಳಿಸಿದರು.

ಇಡೀ ದೇಶದಲ್ಲಿ ಚುನಾವಣಾ ಅಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಏನಾಗಿದೆ ಎಂದು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾನು ಈ ವಿಚಾರವಾಗಿ ಬಿಎಲ್ಎಗಳನ್ನು ಮಾಡಲು ಕೆಲವು ಎಂಎಲ್ ಸಿಗಳಿಗೆ ಜವಾಬ್ದಾರಿ ವಹಿಸಿದೆ. ಎಂಎಲ್ ಸಿ ಆಗುವಾಗ ಇರುವ ಆಸಕ್ತಿ ನಂತರ ಇರುವುದಿಲ್ಲ.

ಕೆಲವು ಎಂಎಲ್ಎ ಅಭ್ಯರ್ಥಿಗಳಿಗೆ ಇದರ ಜವಾಬ್ದಾರಿ ವಹಿಸಿದೆ. ಕೆಲವರಿಗೆ ಚುನಾವಣೆ ನಂತರ ಆಸಕ್ತಿ ತೋರಲಿಲ್ಲ. ಕೆಲವರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ನಮ್ಮ ನಾಯಕರು ಖುದ್ದಾಗಿ ಬರುತ್ತಿದ್ದಾರೆ. ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬರುತ್ತಿದ್ದಾರೆ. ಆಗಸ್ಟ್ 5ರಂದು ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ಮಾಡಲಿರುವ ರ್ಯಾಲಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಿಚಾರವಾಗಿ ನಾನು ಒಂದಷ್ಟು ಸಲಹೆ ಕಳುಹಿಸಿಕೊಟ್ಟಿದ್ದೇನೆ” ಎಂದರು.

Dk Shivakumar
ಆಗಸ್ಟ್ 4ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ; ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

“ನಮ್ಮ ರಾಷ್ಟ್ರೀಯ ನಾಯಕರು ಬಂದಾಗ ಬೆಂಗಳೂರು ನಗರ ವಿಭಾಗ ಬೆಂಗಳೂರು ದಕ್ಷಿಣ ಹಾಗೂ ಗ್ರಾಮಾಂತರ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಹಣ ಕೊಟ್ಟು ಯಾರನ್ನೂ ಕರೆದುಕೊಂಡು ಬರಬೇಡಿ. ಕಾರ್ಯಕರ್ತರು, ಮುಖಂಡರು, ಸಾರ್ವಜನಿಕರು ಬಂದರೆ ಸಾಕು” ಎಂದರು.

“ಸರ್ಕಾರ ಬಂದ ನಂತರ ನಾವು ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿ ನೀಡಿದ್ದೇವೆ. ಗ್ಯಾರಂಟಿ ಸಮಿತಿ, ನಾಮನಿರ್ದೇಶನ ಮಾಡಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಜನರಿಗೆ ಜವಾಬ್ದಾರಿ ನೀಡಿ ಪಟ್ಟಿ ಹೊರಬರಲಿದೆ. ಈಗಾಗಲೇ ಅದು ಸಿದ್ಧವಾಗುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಇಬ್ಬರಂತೆ ಸುಮಾರು 700 ಜನರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಉಳಿದ 30 ಜನರಿಗೆ ಕೆಲವು ನಿಗಮ ಮಂಡಳಿ, ಮತ್ತೆ ಕೆಲವರಿಗೆ ಉಪಾಧ್ಯಕ್ಷ ಹುದ್ದೆ ನೀಡಲಾಗುತ್ತಿದೆ. ಪಟ್ಟಿ ಹೈಕಮಾಂಡ್ ಬಳಿಗೆ ಹೋಗಿದ್ದು, ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಯಾರೆಲ್ಲಾ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪರಿಶೀಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಸುಮಾರು 4-5 ಸಾವಿರ ಜನ ಈ ಸ್ಥಾನಮಾನಕ್ಕೆ ಅರ್ಹತೆ ಹೊಂದಿರುವವರು ಇದ್ದಾರೆ” ಎಂದು ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪರಾಜಿತ ಅಭ್ಯರ್ಥಿ ಹಾಗೂ ಶಾಸಕರ ಜತೆ ನೇರವಾಗಿ ಮಾತನಾಡಿ ಹೆಸರು ಪಡೆದಿದ್ದಾರೆ. ನಾವು ನಮ್ಮ ಸಲಹೆ ನೀಡಿದ್ದೇವೆ. ಈಗ ಕೆಲವರಿಗೆ ಸಿಗದೇ ಇರಬಹುದು. ಮುಂದೆ ನಾವು ಎರಡನೇ ಬಾರಿಗೆ ಮಾಡಿದಾಗ ಅವಕಾಶ ನೀಡುತ್ತೇವೆ. ಎಲ್ಲಾ ಸಮುದಾಯದವರಿಗೆ ಸಮಾನ ಅವಕಾಶ ನೀಡಲು ಚರ್ಚೆ ನಡೆಯುತ್ತಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com