ದಕ್ಷಿಣ ಕನ್ನಡ 'ಕೋಮು ಹತ್ಯೆ' ಸಮಸ್ಯೆ ಪರಿಹರಿಸಲು ಬಯಸುತ್ತಿರುವುದೇ ಆದರೆ, ದ್ವೇಷ ಬಿತ್ತುವ ಗ್ರಂಥಗಳ ನಿಷೇಧಿಸಿ: ಸರ್ಕಾರಕ್ಕೆ ಸಿಟಿ.ರವಿ ಆಗ್ರಹ

ಕರಾವಳಿಯಲ್ಲಿ ರೋಗದ ಮೂಲಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ. ರೋಗದ ಮೂಲ ಮತೀಯ ದ್ವೇಷ ಬಿತ್ತುವ ಮತ ಗ್ರಂಥಗಳಲ್ಲಿದೆ. ದ್ವೇಷ ಬಿತ್ತುವ ಗ್ರಂಥಗಳನ್ನು ನಿಷೇಧಿಸಿದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.
C T Ravi
ಸಿ ಟಿ ರವಿ
Updated on

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೋಮು ಹತ್ಯೆಗಳ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತಿರುವುದು ನಿಜವೇ ಆದರೆ, ಮೊದಲು ದ್ವೇಷ ಬಿತ್ತುವ ಗ್ರಂಥಗಳ ನಿಷೇಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ಶನಿವಾರ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ರೋಗದ ಮೂಲಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ. ರೋಗದ ಮೂಲ ಮತೀಯ ದ್ವೇಷ ಬಿತ್ತುವ ಮತ ಗ್ರಂಥಗಳಲ್ಲಿದೆ. ದ್ವೇಷ ಬಿತ್ತುವ ಗ್ರಂಥಗಳನ್ನು ನಿಷೇಧಿಸಿದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಮತೀಯ ದ್ವೇಷ ಬಿತ್ತುವ ಅಂಶಗಳನ್ನು ನಿಷೇಧಿಸುವ ಧೈರ್ಯ ಸರಕಾರಗಳಿಗೆ ಇದೆಯಾ ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಶಾಂತಿ ನೆಲೆಸಲೇಬೇಕು ಎನ್ನುವುದು ನಮ್ಮ ಆಗ್ರಹವೂ ಇದೆ. ಆದರೆ, ಸಂಘರ್ಷಕ್ಕೆ ಕಾರಣ ಏನು ಎನ್ನುವುದನ್ನು ಆಳುವವರು ಅರ್ಥ ಮಾಡ್ಕೊಬೇಕು. ಗೋಹತ್ಯೆ, ಗೋಕಳ್ಳತನ, ಅಕ್ರಮ ಗೋಸಾಗಾಟ, ಲವ್ ಜಿಹಾದ್, ಮತಾಂತರಗಳು ಸಂಘರ್ಷದ ಮೂಲ. ಇವುಗಳಿಗೆ ಗಾಂಜಾ, ಅಕ್ರಮ ದಂಧೆ, ಮರಳು ದಂಧೆಗಳು ಹಣಕಾಸು ಪೂರೈಸುತ್ತದೆ. ಗೋಹತ್ಯೆ, ಗೋಕಳ್ಳತನ ತಡೆಯುವುದು ಪೊಲೀಸ್ ಇಲಾಖೆಗೆ ಸಾಧ್ಯವಾಗದ ಕೆಲಸ ಅಲ್ಲ. ಲವ್ ಜಿಹಾದ್ ಮೋಸದ ಜಾಲವಾಗಿದ್ದು, ಸಂಘಟಿತ ರೂಪದಲ್ಲಿ ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕಿದರೆ, ಸಂಘರ್ಷ ತನ್ನಿಂತಾನೇ ನಿಲ್ಲುತ್ತದೆ ಎಂದು ಹೇಳಿದರು.

ಎಸ್ಪಿ, ಕಮಿಷನರ್ ಅವರು ತಮ್ಮ ಇಲಾಖೆಯವರು ಅಕ್ರಮ ದಂಧೆಯ ಭಾಗವಾಗಿರುವುದನ್ನು ತಪ್ಪಿಸಬೇಕು. ಇದೇ ವೇಳೆ, ಗೋಕಳ್ಳರು ಮತ್ತು ಗೋಹತ್ಯೆ ತಡೆಯುವವರನ್ನು ಪೊಲೀಸರು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದನ್ನು ಮಾಡಬಾರದು. ರಾತ್ರಿ ವೇಳೆ, ಸುಳ್ಯದ ಹಿರಿಯ ಸ್ವಯಂಸೇವಕರಾದ ನ. ಸೀತಾರಾಮ್, 80 ವರ್ಷದ ಪೂವಪ್ಪರ ಮನೆಗೆ ಹೋಗಿ ಫೋಟೋ ತೆಗೆಯುವುದು ಸಮಾಜಕ್ಕೇನು ಸಂದೇಶ ಕೊಡುತ್ತದೆ ಎಂಬುದನ್ನು ಯೋಚಿಸಬೇಕು. ಎಸ್ಪಿಯವರು ಬಜರಂಗದಳ ಸಂಘಟನೆಯನ್ನು ಕಮ್ಯುನಲ್ ಅಂತ ಹೇಳಿದ್ದಾರೆ, ಬೇಕಾದರೆ ಹಿಂದು ಸಂಘಟನೆ, ರಾಷ್ಟ್ರಭಕ್ತ ಸಂಘಟನೆ ಅಂತ ಹೇಳಲಿ, ನಾವು ಒಪ್ಪಿಕೊಳ್ಳುತ್ತೇವೆ. ಬಜರಂಗದಳ ಅನ್ಯಮತ ದ್ವೇಷಿಗಳಾಗಿ ಎಂದು ಯಾವತ್ತೂ ಹೇಳುವುದಿಲ್ಲ. ರಾಷ್ಟ್ರಭಕ್ತಿಯೇ ಪ್ರಥಮ ಆದ್ಯತೆ ಎನ್ನುವುದನ್ನು ಹೇಳುತ್ತದೆ.

ಅನ್ಯಮತದಲ್ಲಿ ಪ್ರವಾದಿ ಅಂದರೂ ಕೊಲ್ಲುತ್ತಾರೆ, ಬೇರೆ ದೇವರ ಹೆಸರೆತ್ತಿದರೆ ಸಹಿಸುವುದಿಲ್ಲ ಎನ್ನುವುದೇ ಕಮ್ಯುನಲ್ ಅಂತ ಆಗುತ್ತದೆ. ಇದಕ್ಕೆಲ್ಲ ಕಾರಣ ಕೋಮುವಾದ ಬಿತ್ತುವ, ಅನ್ಯರನ್ನು ಕಾಫಿರರು ಎಂದು ಹೇಳುವ ಧರ್ಮ ಗ್ರಂಥಗಳೇ. ಇದರಿಂದಲೇ ಭಯೋತ್ಪಾದನೆ ಜನ್ಮ ತಾಳುತ್ತದೆ. ರಾಷ್ಟ್ರ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಅಂತಲೇ ನಾನು ಈ ವಿಚಾರ ಹೇಳುತ್ತಿದ್ದೇನೆ. ಕಾಂಗ್ರೆಸ್ ಇಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುವುದು ಬೇಡ. ಇಂತಹ ದ್ವೇಷ ಬಿತ್ತುವ ಗ್ರಂಥಗಳು, ಅವುಗಳ ಸಂದೇಶಗಳನ್ನು ನಿಷೇಧಿಸುವುದನ್ನು ಮಾಡಲಿ ಎಂದು ತಿಳಿಸಿದರು.

C T Ravi
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ ಪ್ರಕರಣ: ಸಿಟಿ ರವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಎನ್ನುವ ಕಾಂಗ್ರೆಸಿಗರು, ಆತನ ಅಜ್ಜ ಭೈರ ಶೆಟ್ಟಿ ಇಂದಿರಾ ಗಾಂಧಿ ಕೊಲ್ಲಲ್ಪಟ್ಟಾಗ ಅಂತಿಮ ದರ್ಶನಕ್ಕೆ ದೆಹಲಿಗೆ ಹೋಗಿದ್ದ ಅಪ್ಪಟ ಕಾಂಗ್ರೆಸಿಗ. ಮಾವ ಮೋಹನ್ ಶೆಟ್ಟಿ ರಮಾನಾಥ ರೈಯವರ ಪಕ್ಕಾ ಶಿಷ್ಯ. ಐದಾರು ದಶಕಗಳಿಂದ ಆತನ ಕುಟುಂಬ ಕಾಂಗ್ರೆಸಿನಲ್ಲಿತ್ತು ಎಂಬುದನ್ನೂ ಮರೆತು ವರ್ತನೆ ತೋರಿದ್ದಾರೆ. ರಹಿಮಾನ್ ಕೊಲೆಯಾದಾಗ ಇವರು ಎಚ್ಚತ್ತಿದ್ದಾರೆ. ದನಕಳ್ಳ ಕಬೀರ್ ಎಎನ್ಎಫ್ ನಲ್ಲಿದ್ದ ಪೊಲೀಸ್ ಮೇಲೆ ವಾಹನ ನುಗ್ಗಿಸಿದ್ದಕ್ಕೆ ಪೇದೆ ನವೀನ್ ನಾಯ್ಕ್ ಗುಂಡು ಹೊಡೆದಿದ್ದರು. ಆದರೆ, ಕಾಂಗ್ರೆಸ್ ಸರಕಾರ ಗುಂಡು ಹೊಡೆದ ಪೊಲೀಸನ್ನು ಜೈಲಿಗೆ ಹಾಕಿ, ರೌಡಿ ಕಬೀರ್ ಕುಟುಂಬಕ್ಕೆ ಹತ್ತು ಲಕ್ಷ ಬಹುಮಾನ ಕೊಟ್ಟಿತ್ತು. ಇದು ಕಾಂಗ್ರೆಸ್ ನೀತಿ ಎಂದು ಹೇಳಿದರು.

ಅಬ್ದುಲ್ ರಹಿಮಾನ್ ಕೊಲೆ ಯಾಕಾಗಿದೆ ಎನ್ನುವುದನ್ನು ಪೊಲೀಸರು ಹೇಳಬೇಕು. ಆದರೆ, ವ್ಯಕ್ತಿಗತ ಕಾರಣ ಇದೆ ಎಂಬ ಮಾಹಿತಿಗಳು ಬರುತ್ತಿವೆ. ರಹಿಮಾನ್ ಕುಟುಂಬಕ್ಕೂ ಇದರ ಮಾಹಿತಿ ಇದೆಯಂತೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪೊಲೀಸರೇ ಹೇಳಬೇಕು ಎಂದು ತಿಳಿಸಿದರು.

ಇದೇ ವೇಳೆ ಅಶ್ರಫ್ ಮತ್ತು ಅಬ್ದುಲ್ ರಹಿಮಾನ್ ಹತ್ಯೆಯನ್ನು ಬಿಜೆಪಿ ಏಕೆ ಖಂಡಿಸಲಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿ, ನನಗೆ ಅದರ ಬಗ್ಗೆ ತಿಳಿದಿಲ್ಲ. ಆದರೆ, ನಾಗರಿಕ ಸಮಾಜವು ಯಾವುದೇ ಕೊಲೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ನಾಸಿರ್ ಹುಸೇನ್ ಗೆದ್ದಾಗ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಸಾಬೀತಾಗಿದ್ದು ಈ ಬಗ್ಗೆ ಎಫ್ಐಆರ್ ಆಗಿದೆ. ಈ ವಿಚಾರದಲ್ಲಿ ತನಿಖೆಗೂ ನಾಸಿರ್ ಹುಸೇನ್ ಸಹಕಾರ ನೀಡಿಲ್ಲ. ಇಂಥ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿಸಿದೆ. ಇಂಥ ವ್ಯಕ್ತಿಯ ವರದಿ ಎಷ್ಟು ಸಮಂಜಸ ಇರಬಹುದು ಎನ್ನುವ ಸಂಶಯ ಇದೆ ಎಂದು ಟೀಕಿಸಿದರು.

‘ಆರ್‌ಸಿಬಿ ವಿಜಯೋತ್ಸವದ ವೇಳೆ 11 ಜನರ ಸಾವಾಗಿದೆ ಎಂದು ಗೊತ್ತಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೋಸೆ ತಿನ್ನಲು ತೆರಳಿದ್ದಾರೆ’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಈ ಆರೋಪ ನಿಜವಾಗಿದ್ದರೆ, ಅದು ಖಂಡಿತಾ ಅಮಾನವೀಯ. ಮಕ್ಕಳ ತಂದೆ ತಾಯಿಯ ಸಂಕಟದ ಅರಿವು ಇಲ್ಲದವರು ಮಾತ್ರ ಈ ರೀತಿ ವರ್ತಿಸುತ್ತಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಆ ಕೆಲಸ ಮಾಡಿದ್ದರೆ, ಭಗವಂತನೂ ಅವರನ್ನು ಕ್ಷಮಿಸಲ್ಲ. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯ ಹಾಗೂ ಸಮಾಜದ ಶಾಪ ಅವರಿಗೆ ತಟ್ಟುತ್ತದೆ. ಈ ಆರೋಪ ಸುಳ್ಳಾಗಲೀ ಎಂದು ಪ್ರಾರ್ಥಿಸುತ್ತೇನೆ. ಸತ್ಯ ಆಗಿದ್ದರೆ, ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟು ಹೃದಯಹೀನ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ’ ಎಂದರು.

ಆರ್‌ಸಿಬಿ ವಿಜಯೋತ್ಸವಕ್ಕೆ ಸಂಬಂಧಿಸಿ ಬೆಂಗಳೂರಿನ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಅಮಾನತು ಮಾಡಿದ ಕುರಿತು ಪ್ರತಿಕ್ರಿಯಿಸಿ, ‘ಈ ವಿಜಯೋತ್ಸವ ಆಯೋಜನೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಾತ್ರ ಏನೂ ಇಲ್ಲ. ಅವರಿಬ್ಬರು ಖುಷಿ ಪಡಲಿ ಎಂದು ಪೊಲೀಸ್ ಕಮಿಷನರ್ ಅವರೇ ವಿಜಯೋತ್ಸವ ಆಯೋಜನೆ ಮಾಡಿದ್ದರು. ರಾಜಕೀಯ ಲಾಭ ಪಡೆಯುವ ಉದ್ದೇಶ ಇದ್ದುದೂ ಕಮಿಷನರ್ ಅವರಿಗೆ. ಸಿಎಂ ಮತ್ತು ಡಿಸಿಎಂ ಮಕ್ಕಳು ಮೊಮ್ಮಕ್ಕಳು ಆಟಗಾರರ ಜೊತೆ ಸೆಲ್ಫೀ ತೆಗೆದುಕೊಳ್ಳುವ ವ್ಯವಸ್ಥೆಯನ್ನೂ ಅವರೇ ಮಾಡಿದ್ದರು’ ಎಂದು ವ್ಯಂಗ್ಯವಾಗಿ ಹೇಳಿದರು.‌

ಕಾಲ್ತುಳಿತದಿಂದ ಗಾಯಗೊಂಡವರನ್ನು ಪೊಲಿಸರು ಕೈಯಲ್ಲಿ, ಹೆಗಲಿನಲ್ಲಿ ಹೊತ್ತೊಯ್ದಿದ್ದರು. ಅದೇ ವೇಳೆ ಉಪ ಮುಖ್ಯಮಂತ್ರಿ ಟ್ರೋಫಿ ಎತ್ತಿಕೊಂಡು ಕುಣಿಯುತ್ತಿದ್ದರು. ಜೀವ ರಕ್ಷಣೆಗೆ ಹೋರಾಡುತ್ತಿದ್ದವರು ಈ ದುರಂತಕ್ಕೆ ಹೊಣೆಯೋ. ಅಥವಾ ಅದರ ಲಾಭ ಪಡೆಯಲು ಯತ್ನಿಸಿದವರೋ ಎಂದು ಅವರು ಪ್ರಶ್ನಿಸಿದರು.

ಆರ್‌ಸಿಬಿ ತಂಡವು ರಜ್ಯದ ತಂಡ ಅಲ್ಲ. ಅದರ ಮಾಲೀಕರೂ ರಾಜ್ಯದವರಲ್ಲ. ಆದರೂ ವಿಜಯೋತ್ಸವ ಆಚರಿಸಿದ್ದಾರೆ ಎಂದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ರಹಸ್ಯವಾಗಿ ಹೂಡಿಕೆ ಮಾಡಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com