
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಿವಾಸಿ ಭೂಮಿಕ್ ಅವರ ಮನೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ನ್ಯಾಯದ ಭರವಸೆ ನೀಡಿದರು.
ಮೃತ ಎಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ ಅವರ ತಂದೆ ಡಿ.ಟಿ. ಲಕ್ಷ್ಮಣ್ ಅವರೊಂದಿಗೆ ಮಾತನಾಡಿದ ಆರ್. ಅಶೋಕ್, ಕಳೆದುಹೋದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ನಿಮ್ಮ ಮಗನ ಸಾವಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಭೂಮಿಕ್ ಅವರ ಸಾವು ಕುಟುಂಬಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ರಾಜಕೀಯ ಮಾಡಲು ನಾನು ಇಲ್ಲಿಗೆ ಬಂದಿಲ್ಲ, ಇದ್ದೊಬ್ಬನೇ ಮಗನನ್ನು ಕಳೆದುಕೊಂಡು ಒಂದು ವಾರದಿಂದ ಒಂದೇ ಸಮ ರೋದಿಸುತ್ತಿರುವ ಲಕ್ಷ್ಮಣ ಅವರಿಗೆ ಸಮಾಧಾನ ಹೇಳಲು ಬಂದಿದ್ದೇನೆ ಎಂದರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದವರಾಗಿರುವ ಲಕ್ಷ್ಮಣ ಅವರು, ನೆಲಮಂಗಲದಲ್ಲಿ ಚಿಕ್ಕ ಕಂಪನಿ ನಡೆಸುತ್ತಿದ್ದಾರೆ ಮತ್ತು ಸುಮಾರು 30 ಜನರಿಗೆ ಉದ್ಯೋಗದಾತರಾಗಿದ್ದಾರೆ ಎಂದು ಅಶೋಕ್ ಹೇಳಿದರು.
"ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯನ್ನು ಎರಡು ಅಥವಾ ಮೂರು ದಿನ ಮುಂದೂಡಿದ್ದರೆ, ಯಾರಿಗೂ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಈ ಕುಟುಂಬ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ" ಎಂದು ಅಶೋಕ್ ತಿಳಿಸಿದರು.
ಇಂತಹ ದುರಂತಗಳು ಮತ್ತೆ ಸಂಭವಿಸಬಾರದು ಎಂದು ಒತ್ತಿ ಹೇಳಿದ ಅಶೋಕ್, "ಪೊಲೀಸರು ಕಾರ್ಯಕ್ರಮವನ್ನು ನಡೆಸದಂತೆ ಸಲಹೆ ನೀಡಿದ್ದರೂ ಸರ್ಕಾರ ಅದನ್ನು ಪಾಲಿಸಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ. ನ್ಯಾಯ ಖಚಿತಪಡಿಸಿಕೊಳ್ಳಲು ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭೂಮಿಕ್ ಅವರ ತಂದೆ ಲಕ್ಷ್ಮಣ್, "ಇಂತಹ ದೊಡ್ಡ ಜನಸಂದಣಿಯೊಂದಿಗೆ ಇಂತಹ ಕಾರ್ಯಕ್ರಮ ನಡೆಸಬಾರದು ಎಂದು ಸರ್ಕಾರ ಏಕೆ ಅರಿತುಕೊಳ್ಳಲಿಲ್ಲ? ನಮ್ಮ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪರಿಹಾರ ನೀಡಿದೆ. ಆದರೆ ಆ ಹಣ ನಮ್ಮನ್ನು ನೋಡಿಕೊಳ್ಳುತ್ತದೆಯೇ?" ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ಭೇಟಿ ರಾಜಕೀಯ ಪ್ರೇರಿತವಲ್ಲ ಎಂದು ಸ್ಪಷ್ಟಪಡಿಸಿದ ಲಕ್ಷ್ಮಣ್ ಅವರು, "ನನ್ನ ಮಗನ ಸಾವಿನ ನಂತರ ಮೊದಲ ದಿನದಿಂದ ಅವರು ನನ್ನೊಂದಿಗೆ ನಿಂತಿದ್ದಾರೆ ಮತ್ತು ನನಗೆ ಸಹಾಯ ಮಾಡಿದ್ದಾರೆ. ಅವರು ಮಾನವೀಯತೆಯಿಂದ ಇಲ್ಲಿಗೆ ಬಂದಿದ್ದಾರೆ ಎಂದರು.
Advertisement