ಹಿಂದುಳಿದ ವರ್ಗಗಳಿಗೆ ಸಿದ್ದು ದ್ರೋಹ, ವರ್ಷಾಂತ್ಯದ ವೇಳೆಗೆ ಸಿಎಂ ಬದಲಾವಣೆ ಖಚಿತ: H ವಿಶ್ವನಾಥ್

ಸಮೀಕ್ಷೆಗೆ 1.50 ಲಕ್ಷ ಶಿಕ್ಷಕರು ಬೇಕು. ಈ ಕೆಲಸವನ್ನು ಅಂಗನವಾಡಿ ಕಾರ್ಯಕರ್ತರಿಂದ ಮಾಡಿಸಲು ಸಾಧ್ಯವಿಲ್ಲ.
CM Siddaramaiah and Vishwanath
ಸಿದ್ದರಾಮಯ್ಯ-ಎಚ್ ವಿಶ್ವನಾಥ್
Updated on

ಮೈಸೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲು ವಿಫಲರಾಗುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ಶನಿವಾರ ಆರೋಪಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಅವರು ದ್ರೋಹ ಬಗೆದಿದ್ದು, ಮುಂದಿನ ನವೆಂಬರ್, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಅಧಿಕಾರದಿಂದ ಸಿದ್ದರಾಮಯ್ಯ ಇಳಿಯುವುದು ನಿಶ್ಚಿತವಾಗಿದ್ದು, ಡಿ.ಕೆ. ಶಿವಕುಮಾರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದರು.

ಒಂದು ಪಕ್ಷದಲ್ಲಿ ಐವತ್ತು ವರ್ಷಗಳ ಕಾಲ ಕೆಲಸ ಮಾಡಿರುವ ನನಗೆ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಗೊತ್ತಿದೆ. ಮರು ಜಾತಿ ಗಣತಿ ನಡೆಸುವುದು ಸುಲಭವಲ್ಲ. ಈಗಾಗಲೇ ಶಾಲೆಗಳು ಆರಂಭವಾಗಿದೆ. ಸಮೀಕ್ಷೆಗೆ ಶಿಕ್ಷಕರು ಸಿಗುವುದಿಲ್ಲ. ಇನ್ನು 3 ತಿಂಗಳಲ್ಲಿ ಜಾತಿ ಗಣತಿ ಮರು ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡುವುದು ಸುಲಭವಲ್ಲ. ಹೈಕಮಾಂಡ್ ಆದೇಶಕ್ಕೆ ಹೆದರಿ ವರದಿ ಬಿಡುಗಡೆಗೊಳಿಸಲು ಹಿಂದೆ ಸರಿದಿದ್ದರಿಂದ ಹಿಂದುಳಿದ ವರ್ಗಗಳಿಗೆ ಮಾಡಿದ ಪರ ಅನ್ಯಾಯ ಇದಾಗಿದೆ. ರಾಜ್ಯದಲ್ಲಿ ಜಾತೀವಾರು ಜಾತಿಗಣತಿ ಮಾಡಲು ಹತ್ತು ವರ್ಷಗಳ ಹಿಂದೆ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿದ್ದರಿಂದ ಎರಡು ವರ್ಷಗಳ ಕಾಲ ಶ್ರಮ ಹಾಕಿ ಸಮೀಕ್ಷೆ ಮಾಡಲಾಯಿತು. ಇದಕ್ಕೆ 170 ಕೋಟಿ ರೂ. ಖರ್ಚಾ ಗಿದೆ. ಅಲ್ಲಿಂದ ಸಿದ್ದರಾಮಯ್ಯ ಅವರು ವರದಿಯನ್ನು ಹಾಗೆಯೇ ಇಟ್ಟುಕೊಂಡು ಅಹಿಂದ ವರ್ಗಗಳಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನವದೆಹಲಿಗೆ ಹೋಗಿ ಬಂದ ಮೇಲೆ ಹೆದರಿಕೊಂಡು ಮತ್ತೆ ಮರು ಸಮೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಸಮೀಕ್ಷೆಗೆ 1.50 ಲಕ್ಷ ಶಿಕ್ಷಕರು ಬೇಕು. ಈ ಕೆಲಸವನ್ನು ಅಂಗನವಾಡಿ ಕಾರ್ಯಕರ್ತರಿಂದ ಮಾಡಿಸಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಗಣತಿ ಮಾಡಬೇಕು ಎಂದರು.

CM Siddaramaiah and Vishwanath
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಾಹ್ಯ ಶಕ್ತಿಗಳ ಕೈವಾಡ: NIA ತನಿಖೆಗೆ ಎಸ್‌ಆರ್ ವಿಶ್ವನಾಥ್ ಒತ್ತಾಯ

ಅಹಿಂದ ವರ್ಗಗಳ ಮತ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೇರಿದ ಸಿಎಂ ಈ ವರೆಗು ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವ ಮಾತನ್ನಾಡಿದರೆ ಹೊರತು ಒಂದು ದಿನವೂ ಹೊರಗೆ ಬಿಡಲಿಲ್ಲ. ನವೆಂಬರ್‌ಅಥವಾ ಡಿಸೆಂಬರ್‌ ತಿಂಗಳಲ್ಲಿ ಬದಲಾವಣೆ ಆಗುವುದು ಈಗಾಗಲೇ ನಿರ್ಣಯವಾಗಿದೆ. ನವದೆಹಲಿಯಿಂದ ಮುಖ ಮುಚ್ಚಿಕೊಂಡು ಬಂದರು. ಎಲ್ಲಿ ಹೋಯಿತು ನಿಮ್ಮ ಧೈರ್ಯ ಎಂದು ಅವರು ಕಟುವಾಗಿ ಟೀಕಿಸಿದರು.

ಇದೇ ವೇಳೆ ಬೆಂಗಳೂರು ಕಾಲ್ತುಳಿತ ಘಟನೆಯನ್ನು ಉಲ್ಲೇಖಿಸಿದ ಅವರು, ಆರ್ಸಿಬಿ ವಿಜಯೋತ್ಸವದ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಎಲ್ಲವನ್ನೂ ಕೆಡಿಸಿ ಬಿಟ್ಟರು. ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದುಕೊಂಡಿದ್ದೆ. ಆದರೆ, ವಿಜಯೋತ್ಸವ ವೇಳೆ ಡಿಕೆಶಿ ಎಲ್ಲವನ್ನೂ ಕೆಡಿಸಿಬಿಟ್ಟರು. ಆರ್ಸಿಬಿ ಯಲ್ಲಿ ಕರ್ನಾಟಕದ ಆಟಗಾರರೇ ಇಲ್ಲ. ಆರ್ಸಿಬಿಗೂ ಕರ್ನಾಟಕಕ್ಕೂ ಸಂಬಂಧವೇ ಇಲ್ಲ. ಕಾಲ್ತುಳಿತ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗಳು ವೈರುಧ್ಯದಿಂದ ಕೂಡಿವೆ.

3:30 ಕ್ಕೆ ಕಾಲ್ತುಳಿತ ಆದರೂ ಸಂಜೆ 5:30 ಕ್ಕೆ ಗೊತ್ತಾಯಿತು. ವಿಧಾನಸೌಧ ಕಾರ್ಯಕ್ರಮಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ‌‌. ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ ಎಂದು ಹೇಳಿದ್ದಾರೆ. ಇವರ ತಪ್ಪು ಇಲ್ಲದಿದ್ದರೇ ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಏಕೆ ತೆಗೆದರು ಎಂದು ಹೇಳಬೇಕು? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com