'ನಮ್ಮ ಸ್ಥಾನ ಉಳಿಸಿಕೊಂಡ್ರೆ ಸಾಕಾಗಿದೆ': ಸಚಿವ ಸಂಪುಟ ಪುನಾರಚನೆ ಊಹಾಪೋಹ ಬೆನ್ನಲ್ಲೇ ಜಾರಕಿಹೊಳಿ ಮಹತ್ವದ ಹೇಳಿಕೆ

ನಮ್ಮ ಪಕ್ಷದ ನಾಯಕರು ಇತ್ತೀಚೆಗೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದರು. ಅಲ್ಲಿ ಯಾವ ಚರ್ಚೆಯಾಗಿದೆಯೋ ಗೊತ್ತಿಲ್ಲ.
Minister Satish Jarkiholi
ಸಚಿವ ಸತೀಶ್ ಜಾರಕಿಹೊಳಿ
Updated on

ಬೆಳಗಾವಿ: ರಾಜ್ಯ ರಾಜಕೀಯ ವಲಯದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಕುರಿತು ಊಹಾಪೋಹಗಳು ಶುರುವಾಗಿದ್ದು, ಇದರ ನಡುವಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸ್ಥಾನ ಉಳಿಸಿಕೊಂಡರೆ ಸಾಕಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತೀರ್ಮಾನವನ್ನು ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆಂದು ಹೇಳಿದರು.

ನಮ್ಮ ಪಕ್ಷದ ನಾಯಕರು ಇತ್ತೀಚೆಗೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದರು. ಅಲ್ಲಿ ಯಾವ ಚರ್ಚೆಯಾಗಿದೆಯೋ ಗೊತ್ತಿಲ್ಲ. ಸಂಪುಟ ಪುನರಾಚನೆ ಅಥವಾ ವಿಸ್ತರಣೆ ಮಾಡುವುದು ವರಿಷ್ಠರ ನಿರ್ಧಾರ. ನಾವು ಸಂಪುಟದ ಭಾಗವಷ್ಟೆ. ಬೇರೆಯವರನ್ನು ಸೇರಿಸಿಕೊಳ್ಳುವುದು, ಬಿಡುವುದು ನಮ್ಮ ಕೈಲಿಲ್ಲ. ನಮ್ಮ ಸ್ಥಾನಗಳನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದು ತಿಳಿಸಿದರು.

ರಾಜಕೀಯ ನಿಂತ ನೀರಲ್ಲ. ನದಿ ಹರಿದು ವಿಜಯವಾಡದ ಬಳಿ ಸಮುದ್ರ ಸೇರಬಹುದು, ಸರ್ಕಾರದಲ್ಲಿ ಏರಿಳಿತಗಳು ಸಾಮಾನ್ಯ. ಹಿಂದೆ ಬಿಜೆಪಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದರು. ನಮಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸಚಿವರ ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂದರು.

ಬಹಳಷ್ಟು ಮಂದಿ ಹಿರಿಯರು ನಮಗೂ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಹೊಸ ನಾಯಕತ್ವ ಬಳಸಲು ಬಿಜೆಪಿಯಲ್ಲಿ ಮೊದಲ ಬಾರಿ ಗೆದ್ದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ವಿಧಾನಪರಿಷತ್‌ನ ಆಯ್ಕೆಯಲ್ಲೂ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಆ ಮಾದರಿ ನಮಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.

Minister Satish Jarkiholi
ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ವಿಧಾನಪರಿಷತ್‌ ಸದಸ್ಯರನ್ನು ಸಚಿವರ ಸ್ಥಾನಕ್ಕೆ ಸೇರಿಸಿಕೊಳ್ಳುವುದು ಅಥವಾ ಬಿಡುವುದು ವರಿಷ್ಠರ ಹಂತದಲ್ಲಿರುವ ಚರ್ಚೆ. ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸದ್ಯಕ್ಕೆ ನಮಗೆ ವಹಿಸಿರುವ ಜವಾಬ್ದಾರಿಯತ್ತ ಗಮನ ಹರಿಸುತ್ತೇನೆ. ಮುಖ್ಯಮಂತ್ರಿ ಬದಲಾವಣೆಯಂತೂ ಸದ್ಯಕ್ಕಿಲ್ಲ ಎಂದು ಪುನರುಚ್ಚರಿಸಿದರು.

ಜಾತಿ ಜನಗಣತಿಯ ಮೇಲಿನ ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ಜಾತಿಗಣತಿಗೆ ನೂರಾರು ಕೋಟಿ ರೂ. ವ್ಯಯವಾಗುತ್ತದೆ ಎಂದು ಟೀಕೆ ಮಾಡುವುದು ಸರಿಯಲ್ಲ. ಕೋವಿಡ್‌ ಸಂದರ್ಭದಲ್ಲಿ ಎರಡೂವರೆಯಿಂದ ಮೂರು ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಯಿತು. ಅದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ ಎಂದು ಆರೋಪಿಸಿದರು.

ಇಲ್ಲಿ ದುಡ್ಡಿನ ಪ್ರಶ್ನೆ ಉದ್ಭವಿಸುವುದಿಲ್ಲ. ಜನರನ್ನು ಅಸಮಾಧಾನದಲ್ಲಿಟ್ಟು ವರದಿ ಜಾರಿ ಮಾಡಿದರೆ ಪ್ರಯೋಜನವಾಗುವುದಿಲ್ಲ. ಎಲ್ಲರನ್ನೂ ಸಮಾಧಾನಪಡಿಸಲು ಮತ್ತೆ 300 ಕೋಟಿ ರೂ. ವ್ಯರ್ಥವಾದರೂ ಚಿಂತೆಯಿಲ್ಲ ಎಂದರು.

ಹೈಕಮಾಂಡ್‌ ಸೂಚನೆ ನೀಡಿರುವುದರಲ್ಲಿ ತಪ್ಪಿಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡುವುದು ಸರ್ಕಾರ ಮತ್ತು ಪಕ್ಷದ ಜವಾಬ್ದಾರಿ. ವಿರೋಧ ಮಾಡುವವರು ದೆಹಲಿಗೆ ಹೋಗಿ ದೂರು ನೀಡಿದರು. ಮತ್ತೊಮೆ ಸಮೀಕ್ಷೆ ಮಾಡಿದಾಗ ಯಾರ ಆಕ್ಷೇಪವೂ ಇರುವುದಿಲ್ಲ ಎಂದು ಹೈಕಮಾಂಡ್‌ ಸಲಹೆ ನೀಡಿದೆ ಎಂದರು.

ರಾಜ್ಯಸರ್ಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸುವುದು ರಾಜಕೀಯ ಪ್ರೇರಿತ. ಬಿಜೆಪಿಯವರು ಮುಂದಿನ ಮೂರು ವರ್ಷಗಳ ಕಾಲವೂ ಈ ರೀತಿಯ ಮಾತುಗಳನ್ನು ಹೇಳಿಕೊಳ್ಳುತ್ತಲೇ ಕಾಲ ಕಳೆಯುತ್ತಾರೆ. ಅವರಿಗೆ ಬೇರೆ ವಿಚಾರಗಳಿಲ್ಲ. ಆದರೆ, ನಮಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com