
ಮಂಗಳೂರು: ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದಲೇ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಬುಧವಾರ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜಕೀಯವನ್ನು ವ್ಯಾಪಾರ ಉದ್ಯಮವಾಗಿ ನೋಡುವುದಿಲ್ಲ. ಬೇರೆಯವರ ವೈಫಲ್ಯದಿಂದ ಲಾಭ ಗಳಿಸಲು ನಮಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಉದ್ದೇಶ ನಮಗಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಕಾನೂನುಬಾಹಿರ ವಾತಾವರಣವನ್ನು ಸೃಷ್ಟಿಸಿದ್ದು, ಅದು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರು ಸರ್ಕಾರದ ವೈಫಲ್ಯಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ದೇವರ ದಯೆಯಿಂದ, ಈ ಸರ್ಕಾರವು ಹಾಗೆಯೇ ಮುಂದುವರಿಯಲಿ, ಅವರಲ್ಲಿರುವ ಅವ್ಯವಸ್ಥೆ ಅವರನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ ಎಂದು ಟೀಕಿಸಿದರು.
ರಾಜ್ಯದಲ್ಲಿನ ಪ್ರಸ್ತುತ ಆಡಳಿತದ ಸ್ಥಿತಿ "ಅಘೋಷಿತ ತುರ್ತು ಪರಿಸ್ಥಿತಿ"ಗೆ ಹೋಲುತ್ತದೆ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ಮನಸ್ಥಿತಿಯನ್ನು ಹೊಂದಿಲ್ಲ ಸರ್ವಾಧಿಕಾರಿ ಪ್ರವೃತ್ತಿಗಳಿಂದ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಭ್ರಷ್ಟಾಚಾರದ ಕುರಿತು ಆಂತರಿಕ ಪೈಪೋಟಿ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ವೈಮನಸ್ಸು ಏರ್ಪಟ್ಟಿದೆ. ಈ ವೈನಸ್ಸು ಹಲವಾರು ಬಾರಿ ಬಹಿರಂಗಗೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡುವ ಅಧಿಕಾರ ನನಗಿಲ್ಲ ಎಂದರು.
ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ,"ಅವರು ಯಾವ ಪಕ್ಷಕ್ಕೆ ಸೇರಿದವರು ಎಂದು ನನಗೆ ತಿಳಿದಿಲ್ಲ, ಆದರೆ, ಅವರು ಖಂಡಿತವಾಗಿಯೂ ನಮ್ಮ ಸದಸ್ಯರಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದವರನ್ನು ಮತ್ತೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Advertisement