BJP ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ವಿಜಯೇಂದ್ರಗೆ ಕೊಕ್? ಕಮಲ ಪಾಳಯದ ಮುಂದಿನ ಸಾರಥಿ ಯಾರು?

ಬಿ.ವೈ. ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರು ದಿಢೀರನೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
BJP Meeting
ಬಿಜೆಪಿ
Updated on

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಪಕ್ಷದಲ್ಲಿ ಮೇಜರ್​ ಸರ್ಜರಿ ಮಾಡಲಾಗುತ್ತದೆ ಎಂದು ರಾಜ್ಯ ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಬಿ.ವೈ. ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರು ದಿಢೀರನೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರು ಕೆಳಗಿಳಿಯುವ ಸಾಧ್ಯತೆಗಳಿದ್ದು, ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬರುತ್ತಿವೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ನನ್ನ ದೆಹಲಿ ಭೇಟಿ ವೈಯಕ್ತಿಕ. ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರ ಹೆಸರು ಘೋಷಣೆ ಅತಿ ಶೀಘ್ರದಲ್ಲೆ ಆಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ರಾಜ್ಯಾಧ್ಯಕ್ಷರು ಯಾರಾಗುತ್ತಾರೆಂಬ ಕುರಿತಂತೆಯೂ ಊಹಾಪೋಹಗಳು ಶುರುವಾಗುವಂತೆ ಮಾಡಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ 18 ಸ್ಥಾನ ಗಳಿಸುವಂತೆ ಮಾಡಿದ್ದ ವಿಜಯೇಂದ್ರ ಪರ ಹಲವು ನಾಯಕರಿದ್ದು, ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದ್ದೇ ಆದರೆ, ಸ್ಥಾನಕ್ಕೆ ಬಿ.ವೈ.ರಾಘವೇಂದ್ರ ಅವರನ್ನು ನೇಮಿಸಿ, ಅಸಮಾಧಾನವನ್ನು ಶಮನಗೊಳಿಸಲು ಬಿಜೆಪಿ ಯತ್ನಿಸಬಹುದು ಎನ್ನಲಾಗುತ್ತಿದೆ.

ಈ ಮೂಲಕ ಅಸಮಾಧಾನಕ್ಕೂ ಮದ್ದು ನೀಡಿ, ಯಡಿಯೂರಪ್ಪ ಕುಟುಂಬಕ್ಕೂ ಗೌರವ ನೀಡಲು, ಯಡಿಯೂರಪ್ಪ ಅವರನ್ನು ದ್ವೇಷಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಹೈಕಮಾಂಡ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರ ಹೆಸರೂ ಕೂಡ ಕೇಳಿ ಬರುತ್ತಿದೆ.

BJP Meeting
ಬಿವೈ ವಿಜಯೇಂದ್ರ ದೆಹಲಿಗೆ ದಿಢೀರ್‌ ಪ್ರಯಾಣ: ನಾಯಕತ್ವ ಬದಲಾವಣೆ ಕುರಿತು ಊಹಾಪೋಹ!

ಇಬ್ಬರೂ ಅನುಭವಿ ನಾಯಕರಾಗಿದ್ದಾರೆ. ಪಕ್ಷವು ಉತ್ತರ ಕರ್ನಾಟಕದ ನಾಯಕ ಮತ್ತು ಅನುಭವ ಹೊಂದಿರುವ ಲಿಂಗಾಯತ ವ್ಯಕ್ತಿಯನ್ನು ಬಯಸಿದರೆ, ಬೊಮ್ಮಾಯಿ ಅವರನ್ನು ನೇಮಿಸಬಹುದು ಎನ್ನಲಾಗಿದೆ.

ಇದಲ್ಲದೆ, ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್ ಮತ್ತು ಮುರುಗೇಶ್ ನಿರಾಣಿ ಹೆಸರೂ ಕೇಳಿ ಬರುತ್ತಿದೆ. ಆದರೆ ಅವರನ್ನು ಸದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಮುದಾಯದ ಚುನಾವಣಾ ಮಹತ್ವ ಮತ್ತು ಜಾತಿ ಪ್ರಾತಿನಿಧ್ಯದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ರಾಜ್ಯಾಧ್ಯಕ್ಷರು ಲಿಂಗಾಯತ ನಾಯಕರಾಗಿರಬೇಕು ಎಂಬ ಬಲವಾದ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿದೆ. ಆದಾಗ್ಯೂ, ಬಿಲ್ಲವ ಸಮುದಾಯದ ನಾಯಕ ಸುನಿಲ್ ಕುಮಾರ್ ಮತ್ತು ಒಕ್ಕಲಿಗ ಮಹಿಳೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರರ ಹೆಸರುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಈ ನಡುವೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನೂ ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ದೆಹಲಿಗೆ ಭೇಟಿ ನೀಡಿದ್ದ ವಿಜಯೇಂದ್ರ ಅವರು, ಈಗಾಗಲೇ ರಾಜ್ಯಕ್ಕೆ ವಾಪಸ್ಸಾಗಿದ್ದು, ಅಶೋಕ್ ಅವರು ಇನ್ನೂ ದೆಹಲಿಯಲ್ಲಿಯೇ ಇರುವುದು ಈ ಚರ್ಚೆಗಳಿಗೆ ಮತ್ತಷ್ಟು ಇಂಬು ನೀಡಿದೆ.

ಆರ್. ಅಶೋಕ ಅವರು ಧರ್ಮೇಂದ್ರ ಪ್ರಧಾನ್, ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ್, ಎಚ್.ಡಿ. ಕುಮಾರಸ್ವಾಮಿ ಮತ್ತು ಇತರರು ಸೇರಿದಂತೆ ಹಲವಾರು ನಾಯಕರನ್ನು ಭೇಟಿ ಮಾಡಲು ದೆಹಲಿಯಲ್ಲಿಯೇ ಉಳಿದಿದ್ದಾರೆಂದು ತಿಳಿದುಬಂದಿದೆ.

ಏತನ್ಮಧ್ಯೆ ರಾಜ್ಯ ಬಿಜೆಪಿಯನ್ನು ಒಗ್ಗೂಡಿಸಿ ಮುಂದಿನ ರಾಜ್ಯ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯಬಲ್ಲ ನಾಯಕನನ್ನು ಆಯ್ಕೆ ಮಾಡುವತ್ತ ಕೇಂದ್ರ ನಾಯಕತ್ವವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

BJP Meeting
ಸ್ಥಳೀಯ ಸಂಸ್ಥೆ ಚುನಾವಣೆ: ಪಕ್ಷ ಬಲವರ್ಧನೆಯತ್ತ ಬಿಜೆಪಿ ಚಿತ್ತ, ಶೀಘ್ರದಲ್ಲೇ ನಾಯಕರಿಂದ ರಾಜ್ಯ ಪ್ರವಾಸ!

ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿರುವುದರಿಂದ ಮತ್ತು ಪ್ರಮುಖ ನಾಯಕರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿರುವುದರಿಂದ ಮುಂದಿನ ಕೆಲವು ದಿನಗಳು ಪಕ್ಷದ ರಾಜ್ಯ ಘಟಕಕ್ಕೆ ನಿರ್ಣಾಯಕವಾಗುವ ಸಾಧ್ಯತೆಯಿದೆ.

ಇನ್ನು ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಅವರು, ಕಳೆದ ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಪಕ್ಷದ ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ. ಈ ವಿಶ್ವಾಸ ನಮ್ಮ ಕಾರ್ಯಕರ್ತರು, ನಮ್ಮ ಮುಖಂಡರಲ್ಲೂಇದೆ. ಹಾಗಾಗಿ ಒಳ್ಳೆಯದಾಗಲಿದೆ ಎಂದು ಹೇಳಿದರು.

ಗೊಂದಲದ ಕಾರಣ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಮುಂದೂಡಲಾಗುತ್ತಿದೆ ಎಂಬುದು ಸತ್ಯವಲ್ಲ. ಸದ್ಯ 14 ರಾಜ್ಯಗಳ ಅಧ್ಯಕ್ಷರ ಆಯ್ಕೆಯಾಗಿದೆ. ಶೀಘ್ರದಲ್ಲೇ ಇನ್ನೂ ಆರೇಳು ರಾಜ್ಯಗಳ ಅಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದ ಸ್ಥಿತಿಯಿದೆ ಎಂಬ ಸದಾನಂದಗೌಡ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸದಾನಂದಗೌಡರು ಹಿರಿಯರಿದ್ದಾರೆ. ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಆದರೆ, ಬೂದಿಮುಚ್ಚಿದ ಕೆಂಡದಂತಿದೆ ಎಂಬುದನ್ನು ಒಪ್ಪುವುದಿಲ್ಲ ಎಂದರು.

ವೈಯಕ್ತಿಕ ಕಾರಣಕ್ಕಾಗಿ ದೆಹಲಿಗೆ ಹೋಗಿದ್ದೆ. ರಾಷ್ಟ್ರೀಯ ನಾಯಕರನ್ನಾಗಲೀ ಅಥವಾ ಯಾರನ್ನೂ ಭೇಟಿಯಾಗಿಲ್ಲ. ಆರ್‌ ಅಶೋಕ್‌ ಅವರು ಪ್ರತಿಪಕ್ಷದ ನಾಯಕರಿದ್ದಾರೆ. ಜೊತೆಗೆ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ಆದರೆ, ಮಾಧ್ಯಮದಲ್ಲಿ ಪ್ರತಿಪಕ್ಷ ನಾಯಕರ ಬದಲಾವಣೆ ಬಗ್ಗೆ ಪ್ರಸ್ತಾಪವಾಗುತ್ತಿದೆ ಎಂಬ ಚರ್ಚೆ ನಡೆದಿದೆ. ಇದು ಖಂಡಿತ ಸರಿಯಲ್ಲ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದರು.

ಹಿಂದಿನಿಂದ ಅಸಮಾಧಾನ ತೋಡಿಕೊಳ್ಳುತ್ತಿದ್ದವರು ಈಗ ಪಕ್ಷದಿಂದ ಹೊರಗಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ಮಾಡಿದವರೂ ಪಕ್ಷದಿಂದ ಹೊರಗಿದ್ದಾರೆ. ಇನ್ನೂ ಕೆಲವರು ತಮ್ಮ ಸಣ್ಣಪುಟ್ಟ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ನಾನು, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು, ಇನ್ನೂ ಕೆಲವು ಮುಖಂಡರು ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಬೇಕೆಂದು ಯೋಚಿಸಿದ್ದೇವೆ. ಈಗಾಗಲೇ ಪ್ರಲ್ಹಾದ್‌ ಜೋಶಿಯವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿಯಾಗಲಿದೆ. ಆತಂಕ ಪಡುವ ಯಾವುದೇ ವಿಚಾರ ಇಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com