
ಬೆಂಗಳೂರು: ಸಾಮಾಜಿಕ-ಆರ್ಥಿಕ ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಜನಗಣತಿ ವರದಿ) ಅನ್ನು ನಿರ್ಲಕ್ಷಿಸಿರುವ ರಾಜ್ಯ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಗತಿಯನ್ನೇ ಎದುರಿಸಲಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ಶನಿವಾರ ಭವಿಷ್ಯ ನುಡಿದಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಆಯೋಜಿಸಿದ್ದ 'ಜಾತಿ ಜನಗಣತಿ: ಹಿಂದಿನ ದೃಷ್ಟಿಕೋನ' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸರ್ಕಾರ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ವಿರೋಧಿಗಳು ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ಇತ್ತೀಚೆಗೆ 2015 ರ ಜಾತಿ ಜನಗಣತಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಉನ್ನತಿಗೆ ಶಿಫಾರಸು ಮಾಡಿದ ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ನು ನಿರ್ಲಕ್ಷಿಸಿದ್ದರಿಂದ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿತು, ಇದೀಗ ಕಾಂಗ್ರೆಸ್ ಕೂಡ ಅದೇ ಹಾದಿ ಹಿಡಿದಿದ್ದು, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಬಿಸಿ ಮತಗಳಿಂದ ಅಧಿಕಾರ ಪಡೆದ ರಾಜೀವ್ ಗಾಂಧಿ ಸಾಮಾಜಿಕ ನ್ಯಾಯ ನೀಡಲಿಲ್ಲ. ಹಿಂದುಳಿದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲ್ಮಟ್ಟಕ್ಕೆ ಬರಬಾರದೆಂದೇ ಕಾಂಗ್ರೆಸ್ ಕಾಕಾ ಕಾಲೇಕರ್ ಆಯೋಗದ ವರದಿ, ಮಂಡಲ್ ವರದಿಗಳನ್ನು ಕಡೆಗಣಿಸಿತು. ಹಿಂದುಳಿದ ವರ್ಗಗಳ ಕಡೆಗಣನೆಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಾ ಬಂತು.
ಭಾರತದ ಪುನರ್ ಜಾಗೃತಿಗಾಗಿ 17-18ನೇ ಶತಮಾನದಲ್ಲಿ ದೇಶದಲ್ಲಿ ಸಾಮಾಜಿಕ ಸುಧಾರಣೆಯ ಆಂದೋಲನ ನಡೆದಿತ್ತು. ಅದರ ಪರಿಣಾಮವಾಗಿಯೇ ನಾವು ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆದೆವು. ದೇಶವು ತುರ್ತು ಪರಿಸ್ಥಿತಿ ಹಾಗೂ ಕೌಟುಂಬಿಕ ಅಧಿಕಾರದಿಂದ ಸ್ವತಂತ್ರವಾದ ಬಳಿಕ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಅಲ್ಲದೆ ಮಂಡಲ್ ಆಯೋಗವನ್ನು ರಚಿಸಿತು. ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್, ಹಿಂದುಳಿದವರ ಸಾಮಾಜಿಕ ನ್ಯಾಯದ ಮಾತನಾಡಲಾರಂಭಿಸಿತ್ತು. ಕೆಲವು ವರ್ಷಗಳ ಬಳಿಕ ಅಧಿಕಾರಕ್ಕೇರಿದ ಕಾಂಗ್ರೆಸ್, ಕಾಕಾ ಕಾಲೇಕರ್ ವರದಿಯ ಮಾದರಿಯಲ್ಲಿ ಮಂಡಲ್ ಆಯೋಗದ ವರದಿಯನ್ನೂ ಕಡೆಗಣಿಸಿತ್ತು.
ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರಕಾರ ಮಂಡಲ್ ಆಯೋಗದ ವರದಿ ಜಾರಿ ಮಾಡುವ ಮೂಲಕ ಮೀಸಲಾತಿ ಅನುಷ್ಠಾನಕ್ಕೆ ತಂದಿತು. ಈ ಕೆಲಸವನ್ನು ಸಂವಿಧಾನವನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವ ಪಕ್ಷ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾ| ಡಾ.ಕೆ.ಭಕ್ತವತ್ಸಲ ಅವರು, ಡಾ.ಅಂಬೇಡ್ಕರ್ ಅವರ ಸಂವಿಧಾನದ ಸಾಮಾಜಿಕ ನ್ಯಾಯ ಚಿಂತನೆಯಡಿ ಎಲ್ಲರೂ ಸಮಾನರು. ದೇಶದ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಆಸ್ತಿಯಾಗಿದ್ದು, ಜಾತಿ ಜನಗಣತಿ ಬಹಳ ಮುಖ್ಯವಾಗಿದೆ. ಆದರೆ, ಜಾತಿ ಜನಗಣತಿ ನಡೆಸುವುದು ಸುಲಭದ ಕೆಲಸವಲ್ಲ. ಹೀಗಾಗಿ, ಎಲ್ಲರೂ ಸಹಕರಿಸುವುದು ಅಗತ್ಯವಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯವು ಕೇವಲ ಹೆಸರಿಗಷ್ಟೇ, ಅದಕ್ಕಾಗಿಯೇ ದೀನದಲಿತರು, ದಲಿತರು ಮತ್ತು ಬಡವರಿಗೆ ನ್ಯಾಯ ಒದಗಿಸಲು ಅಂಕಿಅಂಶಗಳು ಅಗತ್ಯವಾಗಿವೆ. ತೆರಿಗೆ ಪಾವತಿಸದ 30 ವರ್ಷಕ್ಕಿಂತ ಮೇಲ್ಪಟ್ಟವರಿಂದ ನಿಗದಿತ ಮೊತ್ತವನ್ನು ಸಂಗ್ರಹಿಸಿ 60 ವರ್ಷಗಳ ನಂತರ ಅವರಿಗೆ ಪಿಂಚಣಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ತಿಳಿಸಿದರು
Advertisement