
ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಶೇ.60 ರಷ್ಟು ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶನಿವಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದವು. ಆದರೆ, ಈಗ ಆಡಳಿತ ಪಕ್ಷದ ಹಿರಿಯ ನಾಯಕರೂ ಕೂಡ ಆರೋಪಗಳನ್ನು ಮಾಡುತ್ತಿದ್ದಾರೆ, ಇದು ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಯೋಜನೆ ಮಂಜೂರಾತಿ ಮತ್ತು ಮನೆ ಹಂಚಿಕೆಗೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಈ ಸರ್ಕಾರದಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳೂ ನಡೆಯುವಿದಿಲ್ಲ. ಶೇ.60 ರಷ್ಟು ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಏನೂ ಮಾಡುತ್ತಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಲಂಚ ನೀಡಿದವರಿಗೆ ಮನೆಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಮಾಡಿರುವ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದೂ ಒತ್ತಾಯಿಸಿದ್ದಾರೆ.
ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಸಾಲು ಸಾಲು ಭ್ರಷ್ಟಾಚಾರಗಳು ನಡೆಯುತ್ತಿವೆ ಎನ್ನುವುದಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿರುವ ಮಂತ್ರಿಗಳು ಮತ್ತು ಶಾಸಕರೇ ಬೇಸತ್ತು ಪತ್ರ-ಆಡಿಯೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಉದಾಹರಣೆಗೆ ಬಿ.ಆರ್.ಪಾಟೀಲ್ ಅವರು, ಮನೆಗಳನ್ನು ಹಂಚಿಕೆ ಮಾಡುತ್ತಿಲ್ಲ, ಮನೆಗಳನ್ನು ಮಂಜೂರು ಮಾಡುತ್ತಿಲ್ಲ. ನಾನು ಬರೆದ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷನೇ ತೆಗೆದುಕೊಂಡು ಹಣ ತೆಗೆದುಕೊಂಡು ಹೋದರೆ ಮಾತ್ರ ಮನೆಗಳು ಮಂಜೂರು ಆಗುತ್ತಿದೆ. ಈ ಸರ್ಕಾರದಲ್ಲಿ ನನ್ನ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಬಹಳ ಬೇಸರದಿಂದ ಹೇಳಿದ್ದಾರೆ. ಇದನ್ನು ಬಿ.ಆರ್. ಪಾಟೀಲ್ ಅವರು ಎರಡೆರಡು ಬಾರಿ ಹೇಳಿದ್ದಾರೆ.
ಸಚಿವ ಜಮೀರ್ ಅವರು ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಬೇಸರದಿಂದ ಹೇಳಿಕೆ ನೀಡುತ್ತಿದ್ದಾರೆ. 950 ಮನೆಗಳು ನಮ್ಮ ಆಳಂದ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಾನು ಪತ್ರವನ್ನು ಬರೆದಾಗ ಮನೆಗಳನ್ನು ಕೊಟ್ಟಿಲ್ಲ. ನನ್ನದೇ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ತೆಗೆದುಕೊಂಡು ಹೋಗಿ ವಸತಿ ಇಲಾಖೆಗೆ ನೀಡಿದ್ದು, ನಂತರ ದುಡ್ಡು ಪಡೆದು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಿದೆ ಸಾಕ್ಷಿ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದರು. ಇದಕ್ಕಿಂತ ಸಾಕ್ಷಿ ಬೇಕೆ ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಬಾಯಿಬಿಟ್ಟರೆ ಮತ್ತು ಮುಕ್ತವಾಗಿ ಮಾತನಾಡಿದರೆ ಸರ್ಕಾರವೇ ಅಲ್ಲಾಡಿಹೋಗುತ್ತದೆ ಮತ್ತು ಸರ್ಕಾರಕ್ಕೆ ಕಂಟಕ ಬರುತ್ತದೆ ಎಂದು ಬಿ.ಆರ್.ಪಾಟೀಲ್ ರವರು ಹೇಳಿದ್ದಾರೆ. ಅವರೇನೂ ಬಿಜೆಪಿ ಮತ್ತು ಜೆಡಿಎಸ್ ಶಾಸಕರಲ್ಲ.
ಸಚಿವ ಕೃಷ್ಣಬೈರೇಗೌಡರು ತಾಲ್ಲೂಕು ಕಚೇರಿಗೆ ಹೋದಾಗ, ಒಂದೂವರೆ ವರ್ಷದಿಂದ ಪತ್ರವನ್ನು ಇಟ್ಟುಕೊಂಡು ದಾಖಲಾತಿಗಾಗಿ ಓಡಾಟ ಕಂಡುಬಂದಿದೆ. ಅಧಿಕಾರಿಗಳು ಕೆಲಸ ಮಾಡಿ ಕೊಡುತ್ತಿಲ್ಲ. ಏನು ಎಂದು ಮುಕ್ತವಾಗಿ ತಿಳಿಸಿ. ಬೋರ್ಡ್ ಹಾಕಿಬಿಡಿ, ಪಾರದರ್ಶಕವಾಗಿ ರೇಟ್ ನಿಗದಿಪಡಿಸಿ ಎಂದು ಕೃಷ್ಣಬೈರೇಗೌಡರು ಅಧಿಕಾರಿಗಳಿಗೆ ಹೇಳಿದ್ದಾರೆ. ಇದು ಅಧಿಕಾರಿಗಳು ಸಚಿವರ ಮಾತು ಕೇಳುತ್ತಿಲ್ಲ ಎಂಬುದಕ್ಕೆ ಉದಾಹರಣೆ ಎಂದು ಆಕ್ಷೇಪಿಸಿದರು.
Advertisement