
ಬೆಳಗಾವಿ: ಎರಡು ವಿಭಿನ್ನ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಅದಕ್ಕೆ ಬೇರೆ ಬಣ್ಣ ನೀಡಬಾರದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಶನಿವಾರ ಹೇಳಿದರು.
ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಇಶಾ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದೇ ವೇದಿಕೆಯಲ್ಲಿದ್ದ ಕಾಣಿಸಿಕೊಂಡಿದ್ದರು. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಇಶಾ ಫೌಂಡೇಶನ್ ಸಾಮಾನ್ಯವಾಗಿ ಪ್ರತಿ ವರ್ಷ ಮಹಾಶಿವರಾತ್ರಿ ಆಚರಣೆ ವೇಳೆ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಆಹ್ವಾನ ನೀಡುತ್ತದೆ. ಉತ್ತರ ಕರ್ನಾಟಕ ಶ್ರೀಗಳು, ರಾಜಕೀಯ ಪಕ್ಷಗಳ ವಿವಿಧ ನಾಯಕರು ಹಾಗೂ ಮಠಗಳಿಗೆ ಆಹ್ವಾನ ನೀಡುತ್ತಾರೆ. ಅದೇ ರೀತಿ ಈ ಬಾರಿ ಅಮಿತ್ ಶಾ ಹಾಗೂ ಡಿಕೆ.ಶಿವಕುಮಾರ್ ಪ್ರಮುಥ ಅತಿಥಿಯಾಗಿ ಹೋಗಿದ್ದಾರೆ. ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು.
ಶಿವಕುಮಾರ್ ಅವರು ಹಿಂದುತ್ವದತ್ತ ವಾಲುತ್ತಿದ್ದಾರೆಂಬ ಮಾತುಗಳಿಗೆ ಉತ್ತರಿಸಿ, ಪ್ರಜಾಪ್ರಭುತ್ವದಲ್ಲಿ, ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಪಾಲಿಸುವ ಸ್ವಾತಂತ್ರ್ಯವಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ಸಿದ್ಧಾಂತಗಳು ಎರಡು ವಿಭಿನ್ನ ವಿಷಯಗಳಾಗಿವೆ, ಎರಡು ವಿಭಿನ್ನ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿದರೆ, ಅದು ಆಯಾ ಪಕ್ಷಗಳ ಸಿದ್ಧಾಂತಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪ್ರಶ್ನಿಸಿದರು.
ಸದ್ಗುರು ಜಗ್ಗಿ ವಾಸುದೇವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟೀಕಿಸಿರುವ ವಿಚಾರ ಕುರಿತು ಮಾತನಾಡಿ, ಇದು ರಾಹುಲ್ ಗಾಂಧಿಯವರ ವೈಯಕ್ತಿಕ ವಿಷಯವಾಗಿದ್ದು, ಅದನ್ನು ಇಲ್ಲಿ ಚರ್ಚಿಸಬಾರದು ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಊಹಾಪೋಹಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
Advertisement