ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್'ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆ: BJP ಟೀಕೆ

ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರಿಗಾಗಿ ಬಜೆಟ್ ನಲ್ಲಿ ಯಾವುದೇ ವಿಶೇಷ ಯೋಜನೆ ನೀಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು, ತಮ್ಮ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್ ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿ, ಬಜೆಟ್ ನಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಸಂವಿಧಾನದ ಸದಾಶಯಗಳನ್ನು ಗಾಳಿಗೆ ತೂರಿರುವುದು, ಸಾಲದ ಹೊರೆ ಹೆಚ್ಚಿಸಿರುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ, ಕಳೆದ ಬಜೆಟ್ ಘೋಷಣೆಗಳ ಅನುಷ್ಠಾನದ ಬಗ್ಗೆ ಮೌನ, ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಜೆಟ್ ನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ ಎಂದು ಟೀಕಿಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರಿಗಾಗಿ ಬಜೆಟ್ ನಲ್ಲಿ ಯಾವುದೇ ವಿಶೇಷ ಯೋಜನೆ ನೀಡಿಲ್ಲ. ರೈತರ ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮಗಳಿಲ್ಲ. ಸ್ಪಷ್ಟತೆಯಿಲ್ಲದ ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಕೃಷಿಕರು, ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, NHM ನೌಕರರು ಸೇರಿದಂತೆ ಶ್ರಮಿಕ ವರ್ಗಗಳನ್ನು ಕಡೆಗಣಿಸಿ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವುದೇ ಅಂಶಗಳನ್ನು ಬಜೆಟ್ ನಲ್ಲಿ ಕಾರ್ಯಗತಗೊಳಿಸಲು ಯಾವುದೇ ಹೊಸ ಭರವಸೆಯ ಹೆಜ್ಜೆ ಇಡದೇ ಕೊಟ್ಟ ಮಾತು ತಪ್ಪಿದ ಜನ ವಿರೋಧಿ ಬಜೆಟ್'ನ್ನು ಸಿದ್ದರಾಮಯ್ಯನವರು ಮಂಡಿಸಿದ್ದಾರೆಂದು ಟೀಕಿಸಿದ್ದಾರೆ.

ತಾವು ಘೋಷಿಸಿರುವ ಹೊಸ ಕಾರ್ಯಕ್ರಮಗಳಿಗೆ ಹಾಗೂ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣದ ಮೂಲಗಳನ್ನು ಸ್ಪಷ್ಟವಾಗಿ ಎಲ್ಲಿಯೂ ವಿವರಿಸಿಲ್ಲ, ಆ ಮೂಲಕ ಇದೊಂದು ತೋರಿಕೆಯ ಹಾಗೂ ಜನರ ಕಿವಿಗೆ ಹೂ ಮುಡಿಸುವ ಬಜೆಟ್ ಆಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಮಹಿಳಾ ಪರ ಬಜೆಟ್ ಎಂದು ಕೊಂಡಾಡಿದ ಲಕ್ಷ್ಮೀ ಹೆಬ್ಬಾಳ್ಕರ್; ಉದ್ಯೋಗ ಸೃಷ್ಟಿಯತ್ತ ಗಮನವೇ ಹರಿಸಿಲ್ಲ- BJP ಟೀಕೆ

ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಕೇವಲ ಕಾಗದದಲ್ಲೇ ಉಳಿಯುವ ಸಾಧ್ಯತೆ ಗೋಚರವಾಗುತ್ತಿದೆ. 'ಹೇಳುವುದು ಒಂದು ಮಾಡುವುದು ಇನ್ನೊಂದು' ಎಂಬಂತೆ ಈ ಬಜೆಟ್ ಆಗಬಾರದು, ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದವೆಲ್ಲವೂ ಘೋಷಣೆಯಾಗಿಯೇ ಉಳಿದಿದೆ, ಈ ಬಜೆಟ್ ಗೂ ಅದೇ ಗತಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ರಾಜ್ಯದ ದಯನೀಯ ಆರ್ಥಿಕ ಪರಿಸ್ಥಿತಿ ಹೇಳುತ್ತಿದೆ. ತನ್ನ ತೆರಿಗೆ ಪಾಲನ್ನು ಪಡೆಯುವಲ್ಲಿ ಎಡವಿ ಬಿದ್ದಿರುವ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವ ಅಂಶಗಳನ್ನು ಸೇರಿಸಿಕೊಂಡು ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಿದ್ದಾರೆ.

ಸರ್ಕಾರದ ಈ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸೋ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡಕಸುಬಿ ಬಜೆಟ್. ಸಿದ್ದರಾಮಯ್ಯನವರು Outgoing CM ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್ ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್ ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನ ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು‌‌ ಕೇವಲ 'ಬೊಗಳೆರಾಮಯ್ಯ ಬಜೆಟ್' ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಗ್ರಹ ಚಿತ್ರ
ಮಸೀದಿ ಇಮಾಮ್‌ಗಳ ಗೌರವಧನ ಹೆಚ್ಚಳ, ವಕ್ಪ್ ಸಂಸ್ಥೆಗಳ ಜೀರ್ಣೋದ್ಧಾರ: ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಕೊಡುಗೆ ಭರಪೂರ!

ಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಈ ಗ್ಯಾರೆಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನ ದಿಕ್ಕು ತಪ್ಪಿಸಿ, ಮತಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25 ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇ.62% ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು? ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್ ನ ಕಥೆ-ವ್ಯಥೆ. ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್. ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ ಎಂದು ಟೀಕಿಸಿದ್ದಾರೆ.

ಸಂಗ್ರಹ ಚಿತ್ರ
ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ಎಲ್ಲಾ ವರ್ಗದ ಜನರು ಸಂತೋಷಪಡುವಂತಹ ಉಡುಗೊರೆ: ಡಿ.ಕೆ ಶಿವಕುಮಾರ್

ಬಜೆಟ್ ಬ್ರೀಫ್ ಕೇಸ್ ಸಚಿವ ಜಮೀರ್ ಅವರ ಕೈಯಲ್ಲಿ ಇದ್ದಾಗಲೇ ಅಂದುಕೊಂಡೆ ಇದು ಓಲೈಕೆ ಬಜೆಟ್ ಅಂತ. ಸಿದ್ದರಾಮಯ್ಯ ಅವರೇ, ಈ ಬಜೆಟ್ ತಾವು ಸಿದ್ಧಪಡಿಸಿದ್ದೋ ಅಥವಾ ಜಮೀರ್ ಅವರು ಸಿದ್ಧಪಡಿಸಿದ್ದೋ? ಒಮ್ಮೆ ಸ್ಪಷ್ಟನೆ ಕೊಟ್ಟುಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಕ್ರಿಯಿಸಿ, ಬಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದ ಕೇವಲ ಬೆಂಗಳೂರು, ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಇದಾಗಿದೆ ಎಂದು ಟೀಕಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಆದರೆ ಖರ್ಚು ಮಾಡಿಲ್ಲ‌. ಎಸ್ಸಿ ಪಿ ಟಿಎಸ್ ಪಿ ಹಣವನ್ನೂ ಖರ್ಚು ಮಾಡುವುದಿಲ್ಲ. ಕಳೆದ ವರ್ಷ ಆದಾಯ ಸಂಗ್ರಹದಲ್ಲಿ 10 ಸಾವಿರ ಕೋಟಿ ಕಡಿಮೆ ಸಂಗ್ರಹ ಮಾಡಿದ್ದಾರೆ. ಬಂಡವಾಳ ವೆಚ್ಚ ಕೂಡ ಕಡಿಮೆ ಮಾಡಿದ್ದಾರೆ. ಈ ವರ್ಷ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಯಾವುದೇ ದಿಟ್ಟ ಕ್ರಮ ಇಲ್ಲ. ಹೀಗಾಗಿ ಹೆಚ್ಚಿನ ಸಾಲ ತೆಗೆದುಕೊಳ್ಳುವುದೇ ಇವರ ಸಾಧನೆಯಾಗಿದೆ. ಈ ಬಜೆಟ್ ಕರ್ನಾಟಕವನ್ನು ಇನ್ನಷ್ಟು ಸಾಲದ ಕೂಪಕ್ಕೆ ನೂಕಿದೆ. ಕರ್ನಾಟಕ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಕೊಡುಗೆ ಈ ಬಜೆಟ್ ಕೊಟ್ಟಿದೆ. ಹೀಗಾಗಿ ಇದೊಂದು ಜನ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ.

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಯೋಜನೆ ಇಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಕಳೆದ ವರ್ಷವೂ 5 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷವೂ ಕೊಟ್ಟಿದ್ದಾರೆ. ಆದರೆ, ಹಣ ಖರ್ಚು ಮಾಡುವುದಿಲ್ಲ. ಕಿತ್ತೂರು ಕರ್ನಾಕಟ ಭಾಗಕ್ಕೆ ಶೂನ್ಯ ಕೊಡುಗೆ ನೀಡಿದ್ದು, ಇದು ಬೆಂಗಳೂರು ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಆಗಿದೆ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಕೆಲವರ ತುಷ್ಟೀಕರಣ. ಬಹುತೇಕರ ತುಚ್ಛೀಕರಣ. ಇದು ರಾಜ್ಯ ಕಾಂಗ್ರೆಸ್ ಸರಕಾರದ 2025-26ನೇ ಸಾಲಿನ ಆಯವ್ಯಯದ ಹೂರಣ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com