
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಮತ್ತೆ ಸದ್ದು ಮಾಡತೊಡಗಿದ್ದು, ಸಚಿವರನ್ನು ಗುರಿ ಮಾಡಲಾಗುತ್ತಿದೆ ಎಂಬ ಚರ್ಚೆ ರಾಜ್ಕ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಹನಿಟ್ರ್ಯಾಪ್ ವಿಚಾರ ನನಗೆ ಗೊತ್ತಿಲ್ಲ. ತೊಂದರೆಯಾಗಿರುವವರು ಸಮಯ ವ್ಯರ್ಥ ಮಾಡದೆ, ತಕ್ಷಣ ಪೊಲೀಸರಿಗೆ ದೂರು ನೀಡಲಿ ಎಂದು ಹೇಳಿದರು.
ಈ ಬಗ್ಗೆ ತನಿಖೆ ನಡೆಯಲಿ. ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಗೃಹ ಸಚಿವರು ಮತ್ತು ಗೃಹ ಇಲಾಖೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಸೇಡಿನಿಂದಾಗಿ ಭೂ ಅತಿಕ್ರಮಣ ಆರೋಪ ಹೊರಿಸಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ಡಿಕೆ.ಶಿವಕುಮಾರ್ ಅವರು ತಳ್ಳಿಹಾಕಿದರು.
ವಿರೋಧಿ ರಾಜಕೀಯ ಅವರ ಡಿಎನ್ಎಯಲ್ಲಿದೆ. ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಮಾತ್ರ ಪಾಲಿಸಿದ್ದಾರೆ. ಈ ಪ್ರಕರಣವನ್ನು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ದಾಖಲಿಸಿದ್ದಾರೆ. ಇದು ಸೇಡಿನ ರಾಜಕಾರಣ ಹೇಗಾಗುತ್ತದೆ? ನಾವು ಯಾವುದೇ ದೂರು ದಾಖಲಿಸಿಲ್ಲ; ಹಿರೇಮಠ್ ದಾಖಲಿಸಿದ್ದಾರೆ. ಅವರು ನನ್ನ ವಿರುದ್ಧವೂ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ನ್ಯಾಯಾಲಯದ ಆದೇಶದ ನಂತರ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ವಿರೋಧಿ ಉದ್ದೇಶವಿಲ್ಲ ಕುಮಾರಸ್ವಾಮಿ ಮೌನವಾಗಿರುವುದೂ ಕೂಡ ಅವರ ಹಿತದೃಷ್ಟಿಯಿಂದ ಎಂದು ಹೇಳಿದರು.
ಪಕ್ಷದ ಹುದ್ದೆಯನ್ನು ತ್ಯಜಿಸುವ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ಸೇರಿದಂತೆ ಇಲ್ಲಿ ಯಾರೂ ಶಾಶ್ವತವಲ್ಲ. ನನ್ನ ಕಾಲಾವಧಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ನಾವು ಬೇರೆ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪಕ್ಷ ಯಾವಾಗ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧವಾಗಿದ್ದೇವೆ. ಅದು ಇವತ್ತೋ, ನಾಳೆಯೋ, ಐದು ವರ್ಷಗಳ ನಂತರವೋ, 10 ವರ್ಷಗಳ ನಂತರವೋ ಗೊತ್ತಿಲ್ಲ. ಪಕ್ಷಕ್ಕೆ ಹೇಗೆ ನ್ಯಾಯ ಒದಗಿಸಿಕೊಡಬಹುದೋ ನಾನು ನನ್ನ ಪ್ರಯತ್ನ ಮಾಡಿದ್ದೇನೆ. ನಾನು ಯಾವುದೇ ಆತುರದಲ್ಲಿ ಇಲ್ಲ. ಪಕ್ಷದ ತೀರ್ಮಾನದಂತೆ ನಡೆಯುವೆ ಎಂದು ತಿಳಿಸಿದರು.
Advertisement