
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮಿತ್ರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರಕರಣ ಇದೀಗ ಕಾಂಗ್ರೆಸ್ ಹೈ ಕಮಾಂಡ್ ಅಂಗಳ ತಲುಪಿದೆ.
ನಿನ್ನೆಯಷ್ಟೇ ರಾಜಣ್ಣ ಅವರ ಪುತ್ರ ಹಾಗೂ ಎಂಎಲ್‌ಸಿ ರಾಜೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ, ಮಾತುಕತೆ ನಡೆಸಿದರು.
ಮಾತುಕತೆ ವೇಳೆ ತಮ್ಮ ತಂದೆ ಮೇಲೆ ನಡೆದಿರುವ ಹನಿಟ್ರ್ಯಾಪ್ ಯತ್ನ ವಿಚಾರವನ್ನು ಪ್ರಸ್ತಾಪಿಸಿ, ಸಾಕ್ಷ್ಯವಾಗಿ ಕೆಲ ಡಿಜಿಟಲ್ ದಾಖಲೆಗಳನ್ನೂ ನೀಡಿದ್ದಾರೆ. ಅಲ್ಲದೆ, ಹನಿಟ್ರ್ಯಾಪ್ ಪ್ರಕರಣದ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದೂ ಆರೋಪಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ರಾಜೇಂದ್ರ ಅವರು, ಅವರಿಗೆ ಹೆಂಡತಿ, ಮಕ್ಕಳಿಲ್ಲವೇ? ನಮಗೇಕೆ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ದೂರು ದಾಖಲಿಸುವಾಗ ಮುಖ್ಯಮಂತ್ರಿ ಏನು ಹೇಳುತ್ತಾರೋ ಅದನ್ನು ನಾನು ಮತ್ತು ನಮ್ಮ ತಂದೆಯವರು ಪಾಲಿಸುತ್ತೇವೆ ಎಂದು ತಿಳಿಸಿದರು.
ಏತನ್ಮಧ್ಯೆ ರಾಜೇಂದ್ರ ಅವರು ಸೂಕ್ಷ್ಮ ವಿಷಯದ ಕುರಿತು ಇತ್ತೀಚೆಗೆ ಸಚಿವರೊಬ್ಬರ ಸಹಾಯಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಪ್ರಕರಣ ಸಂಬಂಧ ರಾಜಣ್ಣ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶೀಘ್ರದಲ್ಲೇ ನವದೆಹಲಿಗೆ ತೆರಳಲಿದ್ದು, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
ರಾಜಕೀಯವಾಗಿ ತಮ್ಮನ್ನು ಹಿಮ್ಮೆಟ್ಟಿಸಲು ಪಕ್ಶದ ನಾಯಕರು ಹನಿಟ್ರ್ಯಾಪ್ ಮಾಡಲು ಪಿತೂರಿ ನಡೆಸಿದ್ದಾರೆಂದು ಇಬ್ಬರೂ ದೂರು ನೀಡಲಿದ್ದಾರೆಂದು ತಿಳಿದುಬಂದಿದೆ.
ಸದ್ಯ ಹನಿಟ್ರ್ಯಾಪ್ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ತನ್ನದ ಮಾರ್ಗಗಳ ಮೂಲಕ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ಕ್ರಮಕ್ಕೂ ಮುನ್ನು ತಮ್ಮ ಆಯ್ಕೆಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಜಣ್ಣ ಅವರು, ಬುಧವಾರ ಅಥವಾ ಗುರುವಾರ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಲಿಖಿತ ದೂರು ಸಲ್ಲಿಸುವುದಾಗಿ ತಿಳಿಸಿದ್ದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೂ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
Advertisement