
ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ತಲ್ಲಣ ಸೃಷ್ಟಿಸಿದೆ. ಈ ನಡುವಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಸೌಜನ್ಯ ಭೇಟಿ ಎಂದು ಖರ್ಗೆ ಹೇಳಿಕೊಂಡರೂ, ಹನಿಟ್ರ್ಯಾಪ್ ಬಗ್ಗೆ ಚರ್ಚಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಿಂದ ಪಕ್ಷಕ್ಕೆ ಆಗುವ ಹಾನಿಯನ್ನು ನಿಯಂತ್ರಿಸಲು ಸಾಧ್ಯವಾದಷ್ಟು ಬೇಗ ತನಿಖೆಗೆ ಆದೇಶಿಸುವಂತೆ ಸಿದ್ದರಾಮಯ್ಯ ಅವರಿಗೆ ಖರ್ಗೆ ಸಲಹೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆಯವರು, ಸಿದ್ದರಾಮಯ್ಯ ಅವರೇ ನನ್ನ ಮನೆಗೆ ಬರಲು ಬಯಸಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿಯಿಂದಾಗಿ ನಾನೇ ಸ್ವಯಂಪ್ರೇರಿತನಾಗಿ ಅವರನ್ನು ಭೇಟಿಯಾಗಲು ಬಂದೆ. ಅವರ ಆರೋಗ್ಯ ವಿಚಾರಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ ಹನಿಟ್ರ್ಯಾಪ್ ಪ್ರಕರಣ ಕುರಿತ ಪ್ರಶ್ನೆಗ ಉತ್ತರಿಸಿ, ಪ್ರಕರಣ ದೆಹಲಿಯಲ್ಲಿ ನಡೆದಿದೆಯೇ? ಇಲ್ಲಿನ ನಾಯಕರನ್ನೇ ಕೇಳಿ ಎಂದು ಹೇಳಿದರು.
ಮೂಲಗಳ ಪ್ರಕಾರ, ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವನ್ನು ಖರ್ಗೆಯವರ ಗಮನಕ್ಕೆ ತಂದಿದ್ದು, ಈ ಸಂದರ್ಭದಲ್ಲಿ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕೂಡ ಹಾಜರಿದ್ದರು ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿಗಳು ಹರಡಿದ್ದು, ಬಿಜೆಪಿ ಈ ವಿಷಯವನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಖರ್ಗೆ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ನನ್ನ ನಿವಾಸಕ್ಕೆ ಭೇಟಿ ನೀಡಿ, ನನ್ನ ಆರೋಗ್ಯ ವಿಚಾರಿಸಿ, ನನ್ನ ಮೊಣಕಾಲು ನೋವಿನಿಂದ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ನನ್ನ ಮೇಲಿನ ಅವರ ನಂಬಿಕೆ ಮತ್ತು ಕಾಳಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ರಾಜಣ್ಣ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನವದೆಹಲಿಯಲ್ಲಿ ಹೈಕಮಾಂಡ್ ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಚಿಂತನೆ ನಡೆಸುತ್ತಿದ್ದು, ಈ ನಡುವೆ ಖರ್ಗೆಯವರು ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ ತಮ್ಮ ಚಿಂತನೆಯನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ರಾಜೇಂದ್ರ ಅವರು ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡುವುದಾಗಿ ಪುನರುಚ್ಚರಿಸಿದ್ದಾರೆ
Advertisement