
ಬೆಂಗಳೂರು: ಬಣ ರಾಜಕೀಯ ಮತ್ತು ಆಂತರಿಕ ಕಚ್ಚಾಟದಿಂದ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಬಿಜೆಪಿ ನಾಯಕರಿಗೆ ಕಮಲ ಪಡೆಯ ಹೈಕಮಾಂಡ್ ಶಾಕ್ ನೀಡಿದ್ದು, 3 ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ (show-cause notice) ನೀಡಿತ್ತು.
ಇದರ ಬೆನ್ನಲ್ಲೇ ಇದೀಗ ಮೂವರು ಶಾಸಕರು ಹಾಗೂ ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್ ನೀಡಿದೆ. 72 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.
ಪಕ್ಷದ ಆಂತರಿಕ ವಿಚಾರ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಿದ ಆರೋಪದ ಮೇಲೆ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಹಾಗೂ ಬಿ.ಪಿ.ಹರೀಶ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಇದರ ಜೊತೆಗೆ ಯಡಿಯೂರಪ್ಪನವರ ಆಪ್ತರಾದ ಮಾಜಿ ಸಚಿವರಾದ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೂ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಣ ರಾಜಕೀಯಕ್ಕೆ ಖಡಕ್ ಸಂದೇಶ
ಇನ್ನು ಇಂದು ಶೋಕಾಸ್ ನೋಟಿಸ್ ಬಂದಿರುವ ಶಾಸಕ ಬಿ.ಪಿ ಹರೀಶ್ ಅವರು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ರೇಣುಕಾಚಾರ್ಯ ಹಾಗೂ ಸುಬ್ರಹ್ಮಣ್ಯ ನಾಯ್ಡು ಸೇರಿಕೊಂಡು ಯತ್ನಾಳ್ಗೆ ಟಾಂಗ್ ಕೊಡಲು ಸಭೆ ಮೇಲೆ ಸಭೆ ಮಾಡಿದ್ದರು.
ಅಲ್ಲದೇ ಬೃಹತ್ ಸಮಾವೇಶ ಮಾಡುವ ಮೂಲಕ ಪರೋಕ್ಷವಾಗಿ ಯತ್ನಾಳ್ ಹಾಗೂ ಹೈಕಮಾಂಡ್ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ನಡುವೆಯೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪಕ್ಷವಿರೋಧಿಗಳಿಗೂ ಖಡಕ್ ಎಚ್ಚರಿಕೆ
ಅಂತೆಯೇ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ರೆಬೆಲ್ ಶಾಸಕರಾಗಿದ್ದು, ಇವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದಾರೆ. ಅಲ್ಲದೇ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇವರುಗಳಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
Advertisement