
ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ಯತ್ನಾಳ್ (Basangowda Patil Yatnal) ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಪಕ್ಷದ ನಿರ್ಧಾರದ ಕುರಿತು ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಟೀಕಿಸುತ್ತಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ.
ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್ ನೋಟಿಸ್ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದರು. ಕೊನೆಗೆ ಫೆಬ್ರವರಿ 10 ರಂದು ಶೋಕಾಸ್ ನೋಟಿಸ್‌ಗೆ ಯತ್ನಾಳ್ ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಯತ್ನಾಳ್ ಪ್ರತಿಕ್ರಿಯೆ
ಇನ್ನು ಉಚ್ಚಾಟನೆ ಕುರಿತು ಟ್ವೀಟ್ ಮೂಲಕ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, 'ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ || ಉಪಕಾರ ಮಾಡಿದರೆ ಅಪಕರಿಸುವ ಕಾಲ.. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ.. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ..
ಸತ್ಯವಂತರಿಗಿದು ಕಾಲವಲ್ಲ ಎಂಬ ಪುರಂದರ ದಾಸರ ಸಾಲುಗಳನ್ನು ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, 'ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಪಕ್ಷದೊಳಗಿನ ಸುಧಾರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆಯನ್ನು ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. 'ತಪ್ಪನ್ನು .. ತಪ್ಪು ಎಂದು ತೋರಿಸಿದ್ದಕ್ಕೆ' ನನಗೆ ಸಿಕ್ಕ ಪ್ರತಿಫಲವಿದು' ಎಂದು ಹೇಳಿದ್ದಾರೆ.
ಹೋರಾಟ ನಿಲ್ಲಿಸುವುದಿಲ್ಲ
ಇದೇ ವೇಳೆ, ಉಚ್ಚಾಟನೆಯಾದರೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಣೆ ಮಾಡಿರುವ ಯತ್ನಾಳ್, 'ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಮುಂದುವರಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಿವೆ. ನನ್ನನ್ನು ಅಮಾನತುಗೊಳಿಸುವ ನಿರ್ಧಾರವು ಭ್ರಷ್ಟಾಚಾರ, ಕುಟುಂಬ ರಾಜಕೀಯ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಹಿಂದುತ್ವದ ವಿರುದ್ಧದ ನನ್ನ ಹೋರಾಟವನ್ನು ತಡೆಯುವುದಿಲ್ಲ. ನಾನು ನನ್ನ ಜನರಿಗೆ ಅದೇ ಹುರುಪು ಮತ್ತು ದೃಢತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಎಲ್ಲಾ ಕಾರ್ಯಕರ್ತರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ, ಸ್ವಾಮೀಜಿಗಳಿಗೆ, ಮಾಧ್ಯಮಗಳಿಗೆ, ಬೆಂಬಲದ ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ಮತ್ತು ಸರ್ವಶಕ್ತನಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪಕ್ಷದ ಎಲ್ಲ ಸ್ಥಾನಗಳಿಂದಲೂ ಗೇಟ್ ಪಾಸ್
ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ. ಹಾಗೇ ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಎಸ್ ವೈ ಕುಟುಂಬದ ವಿರುದ್ಧ ಯತ್ನಾಳ್ ಬಹಿರಂಗ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದರು. ಅಲ್ಲದೇ ತಮ್ಮದೇ ಒಂದು ತಂಡ ಕಟ್ಟಿಕೊಂಡು ಪ್ರತ್ಯೇಕ ಸಭೆ ಮಾಡುತ್ತಿದ್ದರು. ಈ ಸಂಬಂಧ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಆದರೂ ಯತ್ನಾಳ್ ಸೈಲೆಂಟ್ ಇದರೇ ತಮ್ಮ ಅಬ್ಬರ ಮುಂದುವರಿಸಿದ್ದರು. ಹೀಗಾಗಿ ಇತ್ತೀಚೆಗೆಷ್ಟೇ ಮತ್ತೊಂದು ಶೋಕಾಸ್ ನೀಡಲಾಗಿತ್ತು. ಆದದರೂ ಸಹ ಅವರು ತಮ್ಮ ಮಾತಿನ ಸಮರ ಮುಂದುವರಿಸಿದ್ದರು.
Advertisement