
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬುಧವಾರ ದೆಹಲಿಯಲ್ಲಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿದ ಸಚಿವ ಸತೀಶ್ ಜಾರಕಿಹೊಳಿಯವರು, ಕರ್ನಾಟಕದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ. ಆದರೆ, ರಾಜಕೀಯ ವಿಷಯಗಳ ಕುರಿತ ಚರ್ಚೆಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಬೆಂಗಳೂರಿಗೆ ಬಂದಿಳಿದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಯತ್ನ ಮಾಡಿರುವ ಕುರಿತು ಮಾತನಾಡಿ, ರಾಜಣ್ಣ ಪೊಲೀಸ್ ದೂರು ದಾಖಲಿಸಿದರೆ ತನಿಖೆ ಮುಂದುವರಿಯಲಿದೆ ಎಂದು ಹೇಳಿದರು.
ಈ ನಡುವೆ ಗಡ್ಕರಿಯವರನ್ನೂ ಭೇಟಿ ಮಾಡಿದ ಸತೀಶ್ ಅವರು, ಕರ್ನಾಟಕದಲ್ಲಿ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಹಾಯ ಮಾಡುವಂತೆ ಒತ್ತಾಯಿಸಿದರು.
ನಂತರ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೂ ಚರ್ಚೆ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ರೈಲ್ವೆ ಯೋಜನೆಗಳನ್ನು ತ್ವರಿತ ರೀತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿದರು.
ಮೂಲಗಳ ಪ್ರಕಾರ, ಸತೀಶ್ ಅವರು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದ್ದು, ಗುರುವಾರ ಸಂಜೆ ಸತೀಶ್ ಅವರು ಬೆಂಗಳೂರಿಗೆ ಮರಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸತೀಶ್ ಅವರು, ಪರಿಶಿಷ್ಟ ಸಮುದಾಯದವರಂತಲ್ಲ, ಘರ್ಜಿಸುವ ಹುಲಿಗಳ ಮೇಲೆ ಹನಿಟ್ರ್ಯಾಪ್ ಟಾರ್ಗೆಟ್ ಮಾಡಲಾಗುತ್ತಿದೆ. ಘರ್ಜಿಸುವವರಿಗೆ ಸಿಡಿ ತೋರಿಸುವ ಕೆಲಸ ನಡೆಯುತ್ತಿದೆ, ಹನಿಟ್ರ್ಯಾಪ್ ಪ್ರಕರಣ ಸಂಬಂಧ ಸಚಿವ ಕೆ.ಎನ್.ರಾಜಣ್ಣ ಅವರು ಕಾನೂನು ತಜ್ಞರ ಜೊತೆಗೆ ಚರ್ಚಿಸಿ ದೂರು ನೀಡಬೇಕು. ಈಗಾಗಲೇ ನಾನು ಅವರಿಗೆ ದೂರು ನೀಡುವಂತೆ ಸಲಹೆ ನೀಡಿದ್ದೇನೆ. ದೂರು ದಾಖಲಾದ ಬಳಿಕ ತನಿಖೆ ಆರಂಭವಾಗಲಿದೆ. ಈ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ. ಇದರ ಹಿಂದೆ ಸೂತ್ರದಾರ ಯಾರಿದ್ದಾರೆ ಎಂಬುವುದನ್ನು ಬಹಿರಂಗವಾಗಬೇಕಿದೆ ಎಂದು ಹೇಳಿದ್ದರು.
ಹೈಕಮಾಂಡ್‌ಗೆ ದೂರು ಕೊಡುವಂತಹದ್ದು ಏನಿದೆ? ಸಿಡಿ ಫ್ಯಾಕ್ಟರಿ ಎಲ್ಲಿದೆ ಎಂದು ಪೊಲೀಸರೇ ಪತ್ತೆ ಹಚ್ಚಬೇಕು. ಹನಿಟ್ರ್ಯಾಪ್ ವಿಚಾರದಲ್ಲಿ ದೂರು ಕೊಟ್ಟ ಮೇಲೆಯೇ ಮುಂದಿನ ದಾರಿ. ರಾಜ್ಯ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಮರ್ಥರಿದ್ದಾರೆಂದು ತಿಳಿಸಿದ್ದರು.
Advertisement