
ಬಳ್ಳಾರಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಚಿವ ಶ್ರೀರಾಮುಲು ಅವರು ಗುರುವಾರ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರ ಆಶ್ಚರ್ಯ ತರಿಸಿತು, ಸಮುದಾಯದ ಪ್ರಮುಖ ನಾಯಕನನ್ನು ಕಳೆದುಕೊಳ್ಳುವುದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಹೀಗಾಗಿ ನಿರ್ಧಾರವನ್ನು ಮರುಪರಿಶೀಲಿಸಬೇಕು ಸಲಹೆ ನೀಡಿದರು.
ರಾಜ್ಯದಲ್ಲಿ ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯ 20-24 ರಷ್ಟಿದೆ. ಈ ಸಮುದಾಯದಿಂದ 1970-1980ರ ತನಕ ನಿಜಲಿಂಗಪ್ಪ ಅವರು ಸಿಎಂ ಆಗಿದ್ದರು. ಅದಾದ ಬಳಿಕ ವೀರೇಂದ್ರ ಪಾಟೀಲ್‌ರನ್ನ ಸಿಎಂ ಮಾಡುತ್ತೇವೆ ಎಂದಾಗ 177 ಶಾಸಕರು ಗೆದ್ದಿದ್ದರು. ಆದರೆ, ಬೇರೆ ಬೇರೆ ಕಾರಣದಿಂದ ವೀರೇಂದ್ರ ಪಾಟೀಲ್‌ರನ್ನ ಕೆಳಗಿಳಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆಗ ಆ ಸಂಪೂರ್ಣ ಸಮುದಾಯ ಜನಾತದಳದ ಕಡೆ ವಾಲಿತ್ತು. ಪುನಃ 1994ರಲ್ಲಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ಪರಿಶ್ರಮ ಪಟ್ಟು ಲಿಂಗಾಯತ ಸಮುದಾಯದವರ ಪ್ರೀತಿ, ವಿಶ್ವಾಸದಿಂದ ಬಿಜೆಪಿಗೆ ಬಂದರು. ಆದರೆ, ಇದೀಗ ಪಂಚಮಸಾಲಿಯ ಪ್ರಬಲ ನಾಯಕ ಬಸನಗೌಡ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಾಕಷ್ಟು ಸಾರಿ ಯತ್ನಾಳ್ ಅವರಿಗೆ ಹೇಳಿದ್ದೆ. ನೀವು ನೇರ ನಿಷ್ಠುರವಾದಿ, ಹಿಂದುತ್ವವಾದಿ. ನಿಮಗೆ ತೊಂದರೆ ಆಗುತ್ತೆ ಎಂದರೆ ನೀವು ನಿಷ್ಠುರ ಆಗುತ್ತೀರಿ ಎಂದಿದ್ದೆ. ಆದರೆ, ಇದೀಗ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ಅಮಿತ್ ಶಾ, ನಡ್ಡಾ ಹಾಗೂ ಪ್ರಧಾನಿ ಮೋದಿ ಅವರು ಮರುಪರಿಶೀಲನೆ ಮಾಡಬೇಕು. ಇಡೀ ಪಂಚಮಸಾಲಿ ಸಮುದಾಯ ಬಿಜೆಪಿ ಜೊತೆಗಿದೆ. ಆ ಸಮುದಾಯಕ್ಕೆ ನೋವಾಗಬಾರದು. ಆ ಸಮುದಾಯವನ್ನು ದೂರ ಮಾಡಿಕೊಂಡ್ವಿ ಎಂದು ನೋವು ಪಡಬಾರದು. ಹೀಗಾಗಿ ಮರು ಪರಿಶೀಲನೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಯತ್ನಾಳ್ ಕಟ್ಟಾ ಹಿಂದುತ್ವವಾದಿ, ಹೀಗಾಗಿ ಹಿಂದುತ್ವ ವಾದಿಗಳಿಗೆ ನೋವಾಗಿರುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷದಿಂದ ದೇಶ ದೊಡ್ಡದು. ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ನನಗೂ ಅವಕಾಶ ಸಿಕ್ಕಾಗ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ. ಲಿಂಗಾಯತ ಸಮುದಾಯ ದೊಡ್ಡ ಸಮುದಾಯ, ಏನೇ ಆದರೂ ಇದನ್ನು ಸರಿಪಡಿಸಬೇಕು. ಈ ನಿರ್ಧಾರದಿಂದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಸಮುದಾಯಗಳನ್ನ ಒಗ್ಗೂಡಿಸಿಕೊಂಡು ಹೋಗಬೇಕು. ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಿದರೆ ಪಕ್ಷಕ್ಕೆ ಲಾಭ ಆಗುತ್ತದೆ ಎಂದರು.
Advertisement