ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿ-ಧರ್ಮಗಳ ನಡುವೆ ದ್ವೇಷ ಸೃಷ್ಟಿಸಿ, ವೈಫಲ್ಯ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಯತ್ನ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ದೇಶ ವಿರೋಧಿ ವರ್ತನೆ, ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ಜನದ್ರೋಹವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ‘ಸಂವಿಧಾನ ಉಳಿಸಿ, ಬೆಲೆಯೇರಿಕೆ ನಿಲ್ಲಿಸಿ' ಸಮಾವೇಶವನ್ನುದ್ದೇಶಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
Published on

ಬೆಂಗಳೂರು: ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ದೇಶ ವಿರೋಧಿ ವರ್ತನೆ, ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ಜನದ್ರೋಹವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ‘ಸಂವಿಧಾನ ಉಳಿಸಿ, ಬೆಲೆಯೇರಿಕೆ ನಿಲ್ಲಿಸಿ' ಸಮಾವೇಶವನ್ನುದ್ದೇಶಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ, ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಈ ಜನದ್ರೋಹ ಅರ್ಥವಾಗಿದೆ. ಇದನ್ನು ಮರೆ ಮಾಚಲು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರು ಯಾವುದನ್ನು ತಾನೆ ಬಿಟ್ಟಿದ್ದಾರೆ? ಡಾಲರ್ ಬೆಲೆ 2014 ರಲ್ಲಿ 59 ರೂಪಾಯಿ ಇತ್ತು. ಇವತ್ತು 86 ರೂಪಾಯಿ ಆಗಿದೆ. ಇದಕ್ಕೆ ಯಾರು ಕಾರಣರು ಮೋದಿಯವರೇ? ಇದೇನಾ ನಿಮ್ಮ ಅಚ್ಛೆ ದಿನ್? ಎಂದು ಪ್ರಶ್ನಿಸಿದರು.

50 ಕೆಜಿ ಸಿಮೆಂಟ್ ಬೆಲೆ 2014 ರಲ್ಲಿ 200 ಇದ್ದದ್ದು ಈಗ 450 ರೂ ಆಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 425 ಇದ್ದದ್ದು ಇಂದು 850 ದಾಟಿದೆ. ಶೇ100 ರಷ್ಟು ಬೆಲೆ ಏರಿಕೆ ಮಾಡಿದ್ದೀರಿ. ಜನದ್ರೋಹದ ಪರಮಾವಧಿ ಮುಂದುವರೆಸಿ, ಸಿಲಿಂಡರ್ ಸಬ್ಸಿಡಿ ತೆಗೆದು ಹಾಕಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ಆಗಿದ್ದೀರಿ. ನಿಮ್ಮ ವಂಚನೆಗೆ ಕೊನೆಯೇ ಇಲ್ಲವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ
ದೇಶಾದ್ಯಂತ ಜಾತಿ ಸಮೀಕ್ಷೆಗೆ ಕೇಂದ್ರ ಮೀಸಲಿಟ್ಟಿರುವ ಹಣ ಸಾಕಾಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಪ್ರಹ್ಲಾದ್ ಜೋಶಿ ಅವರೇ ನೀವು ಮತ್ತು ಮೋದಿಯವರು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದ್ದೀರಿ. ಆದರೆ, ನೀವು ಮಾಡಿದ ಪಾಪದ ಕೊಡವನ್ನು ನಮ್ಮ ತಲೆ ಮೇಲೆ ಹೊರಿಸಲು ಯತ್ನಿಸುತ್ತಿದ್ದೀರಿ.‌ ನಿಮಗೆ ನಾಚಿಕೆ ಆಗುವುದಿಲ್ಲವೇ? ರಾಜ್ಯ ಸರ್ಕಾರ ಹಾಲಿನ ದರ 4ರೂ ಹೆಚ್ಚಿಸಿ ಅಷ್ಟೂ ಹಣವನ್ನೂ ರೈತರಿಗೆ ವರ್ಗಾಯಿಸಿದೆ. ಇದರಲ್ಲಿ ಹತ್ತು ಪೈಸೆ ಕೂಡ ಸರ್ಕಾರಕ್ಕೆ ಬರುವುದಿಲ್ಲ. ಆದರೆ, ನೀವು ಹೆಚ್ಚಿಸಿದ ಬೆಲೆ ಏರಿಕೆ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ?

ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅಸಮಾನತೆ, ತಾರತಮ್ಯ ಹೋಗಿಲ್ಲ. ಆದ್ದರಿಂದ ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಭರವಸೆ ಕೊಟ್ಟಿದ್ದೆವು. ನಾವು ಮಾಡಿದ ಘೋಷಣೆಯಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಈಗ ಜಾತಿ ಗಣತಿಗೆ ನಿರ್ಧರಿಸಿದೆ. ಇದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದು ತಿಳಿಸಿದರು.

2025-26 ರ ಬಜೆಟ್‌ನಲ್ಲಿ ರಾಜ್ಯವು ಬಂಡವಾಳ ವೆಚ್ಚಕ್ಕಾಗಿ 83,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಹಿಂದಿನ ವರ್ಷದ 52,000 ಕೋಟಿ ರೂ.ಗಳಿಂದ ಏರಿಕೆಯಾಗಿದೆ. ಇಲಾಖಾ ಹಂಚಿಕೆಯಲ್ಲೂ ಗಣನೀಯ ಏರಿಕೆಯಾಗಿದೆ, ಪ್ರಮುಖ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ 25,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಯನ್ನು ಪ್ರಶ್ನಿಸಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ, ಪ್ರತಿಪಕ್ಷಗಳು ದಾರಿತಪ್ಪಿಸುವ ಯತ್ನ ಮಾಡುತ್ತಿವೆ ಎಂದು ಕಿಡಿಕಾರಿದರು.

ಬಿಜೆಪಿಯ ಜನಕ್ರೋಶ ಯಾತ್ರೆ ಕುರಿತು ಮಾತನಾಡಿ, ಮೋದಿ ಸರ್ಕಾರದ ದೋಷಪೂರಿತ ನೀತಿಗಳು ಅಗತ್ಯ ವಸ್ತುಗಳ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿವೆ. "ಅಚ್ಛೇ ದಿನ್ ಭರವಸೆ ವಿಫಲವಾಗಿದೆ. ಈ ಹಣದುಬ್ಬರಕ್ಕೆ ನಿಜವಾಗಿಯೂ ಯಾರು ಹೊಣೆಗಾರರು ಎಂಬುದರ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಂದು ಕರೆ ನೀಡಿದರು.

ಇದೇ ವೇಳೆ ಹಾಲಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಅವರು, ಸಂಪೂರ್ಣ ಲಾಭ ನೇರವಾಗಿ ಹಾಲು ಉತ್ಪಾದಕರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಬಿಜೆಪಿ ನಾಯಕರ ವಿರುದ್ಧ ತೀವ್ರ ದಾಳಿ ನಡೆಸಿದರು. ಬಿಜೆಪಿಯವರು ಪ್ರತಿಭಟಿಸಲು ಬಯಸಿದರೆ ಅವರು ರಾಜ್ಯ ಸರ್ಕಾರದ ವಿರುದ್ಧವಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ನಡೆಸಬೇಕು ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ರ್ಯಾಲಿಗಳನ್ನು ಅಡ್ಡಿಪಡಿಸಬೇಡಿ ಎಂದು ಶಿವಕುಮಾರ್ ಬಿಜೆಪಿಗೆ ಎಚ್ಚರಿಕೆ ನೀಡಿದರು, ಪ್ರಚೋದನೆಗಳು ಮುಂದುವರಿದರೆ ಬಿಜೆಪಿ ಕಾರ್ಯಕ್ರಮಗಳನ್ನು ತಡೆಯುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com