
ಬೆಂಗಳೂರು: ಮೇ 20 ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು ತುಂಬಲಿದ್ದು, ಇದರ ಬೆನ್ನಲ್ಲೇ ಸಾಧನಾ ಸಮಾವೇಶಕ್ಕೆ ಕೈಪಡೆ ಸಿದ್ಧತೆ ನಡೆಸುತ್ತಿರುವಂತೆಯೇ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯ ಸರ್ಕಾರಕ್ಕೆ 2 ವರ್ಷ ತುಂಬುತ್ತಿದ್ದಂತೆ ಸಂಪುಟದಲ್ಲಿ ಕೆಲವೊಂದು ಬದಲಾವಣೆಗಳು ಮಾಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದ್ದವು. ಆದರೆ, ಸಿದ್ದರಾಮಯ್ಯ ಇದಕ್ಕೆ ಮಣೆ ಹಾಕಿರಲಿಲ್ಲ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಮಾಡಿದ್ದ ಭಾಷಣದ ಸಂದರ್ಭದಲ್ಲಿ ಸಂಪುಟ ಪುನಾರಚನೆ ಸುಳಿವು ನೀಡಿದ್ದರು. ಅಲ್ಲದೆ, ಸಚಿವರಿಗೆ ತ್ಯಾಗದ ಸಲಹೆಯನ್ನೂ ನೀಡಿದ್ದರು. ಆದರೆ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಇದೀಗ ರಾಜ್ಯ ಸರ್ಕಾರಕ್ಕೆ 2 ವರ್ಷ ತುಂಬುತ್ತಿದ್ದಂತೆ ಸಂಪುಟ ಪುನಾರಚನೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಸಚಿವ ಸಂಪುಟಕ್ಕೆ ಸೇರ್ಪಡೆ ಆಗಬೇಕು ಎಂಬ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕಮಾರ್ ಹಾಗೂ ಹೈಕಮಾಂಡ್ ನಾಯಕರ ಜೊತೆ ಲಾಬಿ ನಡೆಸುತ್ತಿದ್ದಾರೆ.
ಎಸ್‌ಟಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಯುವಜನ ಸೇವೆ, ಕ್ರೀಡೆ ಮತ್ತು ಎಸ್‌ಟಿ ಕಲ್ಯಾಣ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು.
ಬಳಿಕ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಪ ಭರಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದರು.
ನಾಗೇಂದ್ರ ಅವರನ್ನು ಮತ್ತೆ ನೇಮಿಸಿಕೊಳ್ಳಲು ಹೈಕಮಾಂಡ್ ಮನವೊಲಿಸಲು ಸಿದ್ದರಾಮಯ್ಯ ಅವರು ಹಲವಾರು ಬಾರಿ ಪ್ರಯತ್ನಿಸಿದ್ದರು. ಆದರೆ ಅವರು ಯಶಸ್ವಿಯಾಗಲಿಲ್ಲ.
ಈ ಬಾರಿಯೂ ಸಿದ್ದರಾಮಯ್ಯ ನಾಗೇಂದ್ರ ಅವರನ್ನು ಮತ್ತೆ ನೇಮಿಸಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಆದರೆ, ಆಗಸ್ಟ್‌ನಲ್ಲಿ ಸಂಪುಟ ಪುನರ್ರಚಿಸುವ ಸಾಧ್ಯತೆ ಹೆಚ್ಚಿದೆ" ಎಂದು ಕಾಂಗ್ರೆಸ್ ನಾಯಕರೊಬ್ಬರು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಹೈಕಮಾಂಡ್ ಅನುಮೋದನೆ ಪಡೆದ ನಂತರ ಸಂಪುಟ ಪುನರ್ರಚನೆಯ ಸಮಯದಲ್ಲಿ ಕಾರ್ಯಕ್ಷಮತೆ ತೋರದ 12 ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಸರ್ಕಾರವು ಎರಡು ವರ್ಷಗಳನ್ನು ಪೂರೈಸುತ್ತಿರುವುದರಿಂದ, ಸಂಪುಟ ಪುನರ್ರಚನೆಯಾಗುವ ಸಾಧ್ಯತೆಯಿದೆ. 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನಾನು ಸಂಪುಟಕ್ಕೆ ಸೇರಲು ಸಾಧ್ಯವಾಗಲಿಲ್ಲ, ಈ ಬಾರಿ ಸೇರ್ಪಡೆಗೊಳ್ಳುವ ವಿಶ್ವಾಸವಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಸಿಎಂ ಮತ್ತು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಕಾಂಗ್ರೆಸ್ ಎಂಎಲ್‌ಸಿ ಸಲೀಮ್ ಅಹ್ಮದ್ ಹೇಳಿದ್ದಾರೆ.
ಈ ಮಧ್ಯೆ, ಖಾಲಿ ಇರುವ ನಾಲ್ಕು ಎಂಎಲ್‌ಸಿ ಹುದ್ದೆಗಳಿಗೆ ಸಿಎಂ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ ಹೆಸರುಗಳಿಗೆ ಹೈಕಮಾಂಡ್ ಇನ್ನೂ ಒಪ್ಪಿಗೆ ನೀಡಿಲ್ಲ ಹೀಗಾಗಿ, ಈ ಹುದ್ದೆಗಳಿಗೆ ಆಕಾಂಕ್ಷಿಗಳನ್ನು ಲಾಬಿ ಮುಂದುವರಿಸಿದ್ದಾರೆ.
ಮೇ 20 ರ ರ್ಯಾಲಿಯ ಬಳಿಕ ಸಿಎಂ ಮತ್ತು ಡಿಸಿಎಂ ಈ ವಿಷಯದ ಬಗ್ಗೆ ಹೈಕಮಾಂಡ್ ನಾಯಕರ ಸಲಹೆಯನ್ನು ತೆಗೆದುಕೊಳ್ಳಲಿದ್ದು, ಒಂದು ವಾರದೊಳಗೆ ಖಾಲಿ ಇರುವ ಎಂಎಲ್‌ಸಿ ಹುದ್ದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಹೊಸಪೇಟೆ ರ್ಯಾಲಿಯ ನಂತರ, ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲು ರಾಜ್ಯಾದ್ಯಂತ ಸರಣಿ ರ್ಯಾಲಿಗಳು ನಡೆಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ, ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ್‌ಗೆ ಮೆಚ್ಚುಗೆ ವ್ಯಕ್ತಪಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಜೈ ಹಿಂದ್ ರ್ಯಾಲಿ ಮುಂದಿನ ವಾರ ನಡೆಯುವ ಸಾಧ್ಯತೆಯಿದೆ.
Advertisement