
ಬೆಂಗಳೂರು: ಟೀಕೆಗಳನ್ನು ಸ್ವಾಗತಿಸಿ. ಆದರೆ, ಸೂಕ್ತ ಪ್ರತಿಕ್ರಿಯೆ ನೀಡುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಕರೆ ನೀಡಿದರು.
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ತ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿಯವರು ನನಗೆ ರಾಜಕೀಯದಲ್ಲಿ ಆದರ್ಶ.ಈ ಹಿಂದೆ ರಾಮನಗರಕ್ಕೆ ಮಾನ್ಯ ರಾಜೀವ್ ಗಾಂಧಿ ಅವರು ಯುವ ಕಾಂಗ್ರೆಸ್ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ನಾನು ಆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ್ದೆ. ಕಾರ್ಯಕ್ರಮದ ಬಳಿಕ ಕಾರಿನಲ್ಲಿ ನನ್ನನ್ನು ಅವರು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದವರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ನಮ್ಮ ನಡುವೆ ಅನೇಕ ಚರ್ಚೆಗಳು ನಡೆದಿತ್ತು. ಅವರೊಂದಿಗಿನ ಈ ಭೇಟಿ ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಹಾಗೇ ಉಳಿದಿದೆ. ಅವರೇ ನನಗೆ ರಾಜಕೀಯದಲ್ಲಿ ಆದರ್ಶ ಎಂದು ಹೇಳಿದರು.
ರಾಜೀವ್ ಗಾಂಧಿಯವರು ಕೈಗೊಂಡ ಕಾರ್ಯಕ್ರಮಗಳು, ಎಲ್ಲಾ ಸಮುದಾಯಕ್ಕೆ ಕಲ್ಪಿಸಿದ ಅವಕಾಶಗಳಿಂದಾಗಿ ನಾವೆಲ್ಲರೂ ಈಗ ಮಂತ್ರಿಯಾಗಲು ಸಾಧ್ಯವಾಗಿದೆ. ಮಹಿಳೆಯರು ಇಂದು ರಾಜಕಾರಣದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿಕೊಟ್ಟ ರಾಜೀವ್ ಗಾಂಧಿ ಅವರೇ ಕಾರಣ. ಪಂಚಾಯತರಾಜ್, ನವೋದಯ ಶಾಲೆಗಳು, ಕಂಪ್ಯೂಟರ್ ಕ್ರಾಂತಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನವ ಭಾರತದ ನಿರ್ಮಾಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ. ನಾವೆಲ್ಲರೂ ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಸಾಗೋಣ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಅವರು (ವಿರೋಧ ಪಕ್ಷ) ಬೆಂಗಳೂರಿನ ಹೆಸರನ್ನು ಹಾಳು ಮಾಡುತ್ತಿದ್ದಾರೆ. ನೀವು, ಪಕ್ಷದ ಕಾರ್ಯಕರ್ತರು, ಅವರಿಗೆ ಸೂಕ್ತ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.
ಭಾರೀ ಮಳೆಯಾದಾಗ ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿ ಏನಾಯಿತು?...ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾದ ಬಿಜೆಪಿ ಮತ್ತು ಜೆಡಿಎಸ್ ಇಂದು ನಮ್ಮ ಸರ್ಕಾರವನ್ನು ಟೀಕಿಸುತ್ತಿವೆ. ನಗರದಲ್ಲಾಗಿರುವ ಅತಿಕ್ರಮಣಗಳಿಗೆ ಯಾರು ಹೊಣೆ? ಅವರು ತಮ್ಮ ಅಧಿಕಾರಾವಧಿಯಲ್ಲಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ನಿರ್ದೇಶನಗಳು ಮತ್ತು ತಡೆಯಾಜ್ಞೆಗಳಿವೆ. ಆದರೆ ಅದರ ಹೊರತಾಗಿಯೂ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ರಾಜಧಾನಿಗೆ ಹೊಸ ಆಕಾರ ನೀಡಲು ಕೆಲಸ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಉತ್ತಮ ಕೆಲಸಗಳಿದೆ ಯಾವಾಗಲೂ ಟೀಕೆಗಳು ಇದ್ದೇ ಇರುತ್ತವೆ. ಅದನ್ನು ನಾವು ಸಂತೋಷದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಅವರು ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಗುಪ್ತಚರ ಸಂಸ್ಥೆಗಳ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವುದಕ್ಕೂ ಮುನ್ನ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿದರು.
ಇದೇ ವೇಳೆ ಭಾರತದ ದಾಳಿಯಲ್ಲಿ ಎಷ್ಟು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
Advertisement