ಅವರು ಎಷ್ಟೇ ಪ್ರಭಾವಿಯಾಗಿದ್ದರೂ ನಮ್ಮ ಪಕ್ಷ ಅಶಿಸ್ತು ಸಹಿಸಲ್ಲ: BJP ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ನಂತರ ಇದೀಗ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಎ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು, ಬಿಜೆಪಿ ತನ್ನ ಯಾವುದೇ ಸದಸ್ಯರನ್ನು ಕಳೆದುಕೊಳ್ಳಲು ಎಂದಿಗೂ ಬಯಸುವುದಿಲ್ಲ, ಆದರೆ ಪಕ್ಷಕ್ಕೆ ಶಿಸ್ತು ಅತ್ಯುನ್ನತ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಉಸ್ತುವಾರಿ ಅಗರ್ವಾಲ್ ಅವರು, ಸೋಮಶೇಖರ್, ಹೆಬ್ಬಾರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಮ್ಮ ನಡೆಗಳನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಸಾಕಷ್ಟು ಅವಕಾಶಗಳನ್ನು ನೀಡಿತ್ತು. ಆದರೆ ಅವರು ಬದಲಾಗಲಿಲ್ಲ ಎಂದು ಹೇಳಿದರು. ಪಕ್ಷಕ್ಕೆ ಶಿಸ್ತಿನ ಸಿಪಾಯಿಗಳು ಬೇಕಿರೋದು, ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅಶಿಸ್ತನ್ನು ಸಹಿಸಲಾಗುವುದಿಲ್ಲ ಎಂದು ಅಗರ್ವಾಲ್ ಒತ್ತಿ ಹೇಳಿದರು.
ಕಾಂಗ್ರೆಸ್ ಸರ್ಕಾರವು ಅಕ್ರಮಗಳನ್ನು ಎತ್ತಿ ತೋರಿಸುವ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೀಡಿದ್ದಕ್ಕೆ ರಾಜ್ಯ ಸರ್ಕಾರ ತಮ್ಮ ಪಕ್ಷದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ ಎಂದು ಹಿರಿಯ ಬಿಜೆಪಿ ನಾಯಕರು ಆರೋಪಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು. ಸಿದ್ದರಾಮಯ್ಯಗೆ ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂಬ ಧೈರ್ಯ ಮತ್ತು ವಿಶ್ವಾಸವಿದ್ದರೆ, ಅವರು ನಮ್ಮ ಸವಾಲನ್ನು ಸ್ವೀಕರಿಸಬೇಕು. ಅದನ್ನು ಅವರು ನಿರಾಕರಿಸಿದರೆ, ಆ ಎಲ್ಲಾ ಆರೋಪಗಳು ನಿಜ ಎಂದು ಒಪ್ಪಿಕೊಳ್ಳಲಿ ಎಂದು ರಾಜ್ಯಸಭಾ ಸದಸ್ಯರು ಹೇಳಿದರು.

ಕೆಲವು ಸಮೀಕ್ಷಾ ವರದಿಗಳನ್ನು ಉಲ್ಲೇಖಿಸಿದ ಅಗರ್ವಾಲ್, ಇಂದು ರಾಜ್ಯ ವಿಧಾನಸಭಾ ಚುನಾವಣೆ ನಡೆದರೆ, ಬಿಜೆಪಿ 150 ರಿಂದ 155 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನ ಜನಪ್ರಿಯತೆ ಕಡಿಮೆಯಾಗುತ್ತಿರುವುದು ಮುಂದುವರಿದರೆ, ಕರ್ನಾಟಕದಲ್ಲಿ ಆಡಳಿತ ಪಕ್ಷವು ಎರಡಂಕಿ ಸ್ಥಾನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.