'ಅಮಾವಾಸ್ಯೆ ದಿನ BJP ಒಳ್ಳೆ ನಿರ್ಧಾರ, 10-12 ಸೀಟ್​ ಖಾಲಿ ಆಗುತ್ತೆ': ST ಸೋಮಶೇಖರ್; 'ಕಾಂಗ್ರೆಸ್ ಗೆ ಸೇರಿಸ್ಕೊಳ್ಳಲ್ಲ'- ಈಶ್ವರ್ ಖಂಡ್ರೆ!

ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿತ್ತು. ಆದ್ರೆ ಯಾವಾಗ ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ.
ST Somashekhar
ಎಸ್ ಟಿ ಸೋಮಶೇಖರ್
Updated on

ಬೆಂಗಳೂರು: ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ತಮ್ಮನ್ನು ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್ ಟಿ ಸೋಮಶೇಖರ್, ಬಿಜೆಪಿಯ 10 ರಿಂದ 12 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯಿಂದ ಗೆದ್ದು ವಿಧಾನಸಭೆ ಪ್ರವೇಶಿಸಿರುವ ಯಶವಂತಪುರ ಶಾಸಕ ಎಸ್​ ಟಿ ಸೋಮಶೇಖರ್ (ST Somashekar) ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಉಚ್ಚಾಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್, 'ಅಮವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ಬೆಳಗ್ಗೆ ಮೊಬೈಲ್​ ನೋಡಿದಾಗ ಈ ವಿಚಾರ ತಿಳಿಯಿತು ಎಂದರು.

ಅಂತೆಯೇ, 'ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿತ್ತು. ಆದ್ರೆ ಯಾವಾಗ ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. 6 ವರ್ಷಗಳ ಕಾಲ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ನೋಟಿಸ್​ ಕೊಡುವ ಮುನ್ನ ಅಮಿತ್ ಶಾ ನನ್ನ ಜತೆ ಮಾತಾಡಿದ್ದರು. ಕ್ಷೇತ್ರದಲ್ಲಿರುವ ಭಿನ್ನಮತದ ಬಗ್ಗೆ ಅಮಿತ್ ಶಾ ಜತೆ ಮಾತನಾಡಿದ್ದೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ತೊರೆಯುವುದಾಗಿ ನಾನು ಹೇಳಿದ್ದೆ. ಬಿಜೆಪಿಯ ಯಾರೂ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಮಾವಾಸ್ಯೆಯ ದಿನ ಒಳ್ಳೆಯದು ಮಾಡಿದ್ದಾರೆ' ಎಂದರು.

ST Somashekhar
BJP ಶಿಸ್ತು ಸಮಿತಿ ವರದಿ: ಪಕ್ಷದಿಂದ ST ಸೋಮಶೇಖರ್, ಶಿವರಾಂ ಹೆಬ್ಬಾರ್ 6 ವರ್ಷ ಉಚ್ಚಾಟನೆ

BJPಯ 10-12 ಸೀಟ್​ ಖಾಲಿ ಆಗುತ್ತೆ

ಇದೇ ವೇಳೆ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್​ ಖಾಲಿ ಆಗುತ್ತೆ ಎಂದು ಎಸ್ ಟಿ ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ಉಚ್ಚಾಟನೆಗೂ ಮುನ್ನ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ನೋಟಿಸ್​ ಗೆ ಉತ್ತರಿಸಿದ್ದೆ. ಬಿಜೆಪಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಸದ್ಯಕ್ಕೆ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ. ಚುನಾವಣೆ ಘೋಷಣೆಯಾದಾಗ ಮುಂದಿನ ನಿರ್ಧಾರ ತಿಳಿಸುತ್ತೇವೆ. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್​ ಖಾಲಿ ಆಗುತ್ತೆ. ಉಚ್ಚಾಟನೆ ಮಾಡಿದವರಿಗೆ ಚಾಮುಂಡೇಶ್ವರಿ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದರು.

ಯತ್ನಾಳ್​ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ

ಇದೇ ವೇಳೆ ನಮ್ಮ ಉಚ್ಚಾಟನೆಗೂ, ಯತ್ನಾಳ್ ಉಚ್ಚಾಟನೆಗೂ ತುಂಬಾ ವ್ಯತ್ಯಾಸವಿದೆ. ಯತ್ನಾಳ್​ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕ ವಿಧಾನಸೌಧದಲ್ಲಿ ರೇಪ್ ಮಾಡುತ್ತಾನೆ. ವಿಪಕ್ಷ ನಾಯಕರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ರಯತ್ನ ಮಾಡುತ್ತಾರೆ. ಒಕ್ಕಲಿಗ ಹೆಣ್ಮಗಳನ್ನು ಮಂಚಕ್ಕೆ ಕರೆಯುವುದನ್ನು ಎಲ್ಲಾದ್ರೂ ಕೇಳಿದ್ದೀರಾ? ಬಿಜೆಪಿ ಪ್ರಾಮಾಣಿಕ ಪಕ್ಷ ಆಗಿದ್ದರೆ ಇಂತಹವರನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸೋಮಶೇಖರ್ ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧವೂ ಕ್ರಮ ಜರುಗಿಸಲಿ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ, ವಿಜಯೇಂದ್ರ ಉಳಿಸಿಕೊಳ್ಳುವ ಪ್ರಯತ್ನಪಡಲಿಲ್ಲ

ಉಚ್ಚಾಟನೆಯಲ್ಲಿ ಬಿಎಸ್​ವೈ, ವಿಜಯೇಂದ್ರರದ್ದು ಯಾವ ಪಾತ್ರ. ಉಳಿದ ನಾಯಕರೂ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ನಾನಾಗಿ ಹೋಗಿ ಮೇಲೆ ಬಿದ್ದು ಕೇಳುವ ಮನಸ್ಸು ನನ್ನದಲ್ಲ. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉಳಿಸಿಕೊಳ್ಳುವ ಪ್ರಯತ್ನ ಮಾಡ್ಲಿಲ್ಲ. ಇಬ್ಬರೂ ಕೂಡ 100% ನನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ಅವರು ಪ್ರಯತ್ನ ಮಾಡಿದ್ದರೆ ಇಂದು ನಾನು ಉಚ್ಚಾಟನೆ ಆಗುತ್ತಿರಲಿಲ್ಲ ಎಂದು ಸೋಮಶೇಖರ್ ಕಿಡಿಕಾರಿದರು.

ST Somashekhar
'ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿರ್ಲಿಲ್ಲಾ.. AIDS ಇಂಜೆಕ್ಷನ್ ಚುಚ್ಚಿರ್ಲಿಲ್ಲ.. ಮುತ್ತು'ರತ್ನ' ಅವರೇ ಇಟ್ಟುಕೊಳ್ಳಲಿ': DK Shivakumar

ನನ್ನನ್ನು ರಾಜಕೀಯವಾಗಿ ನನ್ನ ಬೆಳೆಸಿದ್ದು ಡಿಕೆಶಿ

ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು, ಡಿಕೆ ಶಿವಕುಮಾರ್. ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಡಿ.ಕೆ.ಶಿವಕುಮಾರ್ ಕಾರಣ. ಉತ್ತರಹಳ್ಳಿ ಟಿಕೆಟ್ ಸಿಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಖರ್ಗೆ, ಪರಮೇಶ್ವರ್ ಯಶವಂತಪುರ ಕ್ಷೇತ್ರದ ಟಿಕೆಟ್ ಕೊಡಿಸಿದರು. ಹಿಂದೆ ಕಾಂಗ್ರೆಸ್​ನಲ್ಲಿದ್ದ ಕಾರಣಕ್ಕೆ ಅನುದಾನ ಕೇಳುವ ಕೆಲಸ ಮಾಡಿದೆ. ಅದರಿಂದಾಗಿ ಇವರು ಪಕ್ಷಕ್ಕೆ ಮುಜುಗರ ಆಗುತ್ತೆ ಎನ್ನುವುದಾದರೆ ರೇಪ್, ಏಡ್ಸ್ ಇಂಜೆಕ್ಷನ್ ಯಾವುದೂ ಮುಜುಗರ ಅಲ್ಲವೇ? ಎಂದು ಸೋಮಶೇಖರ್ ಪ್ರಶ್ನಿಸಿದರು.

ಆರ್ ಅಶೋಕ್ ಕಂಡ್ರೆ ಬಿಜೆಪಿಯವರಿಗೇ ಆಗಲ್ಲ..

ಅಂತೆಯೇ ನಾವು 2028ರ ವರೆಗೆ ಶಾಸಕರಾಗಿಯೇ ಇರುತ್ತೇವೆ. 2028ಕ್ಕೆ ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಯಾವ ಬಿಜೆಪಿಯವರು ನನ್ನನ್ನು ಸೋಲಿಸಲು ಬರುತ್ತಾರೋ ನೋಡೋಣ ಎಂದು ಸವಾಲೆಸೆದರು.

ಅಶೋಕ್ ಕಂಡರೆ ಬಿಜೆಪಿಯವರಿಗೆ ಆಗಲ್ಲ ಎಂದ ಸೋಮಶೇಖರ್, 'ಅಸೆಂಬ್ಲಿಯಲ್ಲಿ ಅಶೋಕ್ ಎದ್ದು ನಿಂತರೆ ಹಿಂದೆ ಹೇಗೆಲ್ಲ ಅವನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಎಂದು ಒಮ್ಮೆ ನೆನಪು ಮಾಡಿಕೊಳ್ಳಲಿ. ಎಸ್ ಆರ್ ವಿಶ್ವನಾಥ್ ಏನು ಒಳ್ಳೊಳ್ಳೆ ಮಾತಾಡಿದ್ದಾರಾ ನಿಮಗೆ? ಎಂದು ಪ್ರಶ್ನಿಸಿದರು. ನಾನು ಬಿಜೆಪಿಗೆ ಬಂದ ಮೇಲೆ ಒಮ್ಮೆಯೂ ಆರ್.ಅಶೋಕ್ ವಿರುದ್ಧ ನಾನು ಮಾತಾಡಿಲ್ಲ, ನನ್ನ ಬಗ್ಗೆ ಮಾತಾಡಿದ್ರೆ ಮೂರು ವರ್ಷಗಳ ಕಾಲ ನಾನು ಏನು ಬಿಜೆಪಿಯಲ್ಲಿದ್ದೆ, ಅವಾಗಿನ ನಿಮ್ಮ ಹಿಸ್ಟರಿನೂ ನಾನು ತೆಗೆಯಬೇಕಾಗುತ್ತದೆ. ಯಾರ ಜೊತೆ ಏನು ಒಡಂಬಡಿಕೆ ಮಾಡಿಕೊಂಡಿದ್ದಾರೆ ಅವೆಲ್ಲವೂ ಹೇಳಬೇಕಾಗುತ್ತದೆ. ಉಚ್ಚಾಟನೆ ಮಾಡಿದ್ದಾರೆ ನಾನು ಇವಾಗ ನೆಮ್ಮದಿಯಿಂದ ಇದ್ದೇನೆ. ಇನ್ನೂ ನನ್ನ ಬಗ್ಗೆ ಏನಾದರೂ ಮಾತಾಡಿದ್ರೆ ಸುದ್ದಿಗೋಷ್ಠಿ ಕರೆದು ಹೇಳಬೇಕಾಗುತ್ತದೆ ಎಂದು ಕಿಡಿಕಾರಿದರು.

ಹೆಬ್ಬಾರ್ ಹೇಳಿದ್ದೇನು?

ಯಲ್ಲಾಪುರದಲ್ಲಿ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಶಿವರಾಂ ಹೆಬ್ಬಾರ್, 'ನನಗೂ ಉಚ್ಚಾಟನೆ ಮಾಡಿರುವ ಪತ್ರ ತಲುಪಿದೆ. ಪಕ್ಷ ಯಾವುದೇ ನಿರ್ಣಯ ತೆಗೆದುಕೊಂಡರೂ ನಾನು ಸ್ವಾಗತಿಸುತ್ತೇನೆ. ಪಕ್ಷ ಮಾಡಿರುವ ನಿರ್ಣಯ ಕೈಗೊಂಡಿರುವ ಬಗ್ಗೆ ಉತ್ತರ ಕೊಡಬೇಕು. ಕೆಲವರು ಅನೇಕ ತಪ್ಪು ಮಾಡಿದ ಬಳಿಕ ಉಚ್ಛಾಟಣೆ ನಿರ್ಣಯ ಕೈಗೊಂಡ್ರು. ಕೆಲವರು ತಪ್ಪು ಮಾಡಿದ ಬಳಿಕವೂ ಅವರ ವಿರುದ್ದ ಕ್ರಮ ಇಲ್ಲ. ತಪ್ಪು ಮಾಡದೆ ಇದ್ದರೂ ಅವರ ವಿರುದ್ದ ಕ್ರಮ ಕೈಗೊಂಡಿದ್ದಾರೆ. ನಾನು ತಪ್ಪೆ ಮಾಡಿಲ್ಲ ಉಚ್ಛಾಟನೆಯನ್ನ ಯಾಕೆ ನಿರಿಕ್ಷಿಸಲಿ. ರಾಜಕಾರಣಿಗೆ ಗೆಲುವಿನ ಸಮಯದಲ್ಲಿ ಮಾಡಿದ ದ್ರೋಹಕ್ಕಿಂತ ದೊಡ್ಡ ದ್ರೋಹ ಮತ್ತೊಂದು ಇಲ್ಲ. ನನ್ನ ಸೋಲಿಸಲು ಹುನ್ನಾರ ನಡೆದ ಮೇಲೂ ಕ್ರಮ ಕೈಗೊಂಡಿರಲಿಲ್ಲ. ನಾನು ಶಾಸಕ ಆಗಬಾರದಗಿದ್ರೆ ಬಿ.ಫಾರಂ ಕೊಡಬಾರದಾಗಿತ್ತು. ಬಿ.ಫಾರಂ ಕೊಟ್ಟು ಸೋಲಿಸುವ ಕೆಲಸ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಶಿವರಾಂ ಹೆಬ್ಬಾರ್ ಪ್ರಶ್ನಿಸಿದರು.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ಪ್ರಯತ್ನಿಸಿದ್ರು. ಈ ಬಗ್ಗೆ ಪಕ್ಷದ ಯಾರೆಲ್ಲ ನಾಯಕರಿಗೆ ಹೇಳಬೇಕೋ ಹೇಳಿದ್ದೇನೆ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಜಿಲ್ಲಾ ಮಟ್ಟದ ನಾಯಕರು ಏನೇನು ಮಾಡಿದ್ದಾರೆಂದು ಹೇಳಿದ್ದೇನೆ. ಪಶ್ಚಾತ್ತಾಪದಿಂದ ನಾನು ಈ ಮಾತನ್ನು ಹೇಳುತ್ತಿಲ್ಲ. ಪಕ್ಷ ಕೈಗೊಂಡಿರುವ ನಿರ್ಣಯದ ಕುರಿತು ಹೇಳುತ್ತಿದ್ದೇನೆ. ​ಸಾರ್ವಜನಿಕರ ರಂಗದಲ್ಲಿ ಇರುವವರಿಗೆ ಸ್ವಲ್ಪವಾದ್ರೂ ಸ್ವಾಭಿಮಾನ ಇರಬೇಕು. ಯಾರನ್ನು ಉಚ್ಛಾಟನೆ ಮಾಡಬೇಕಿದೆ ಎಂದು ಎಲ್ಲರಿಗೂ ಗೊತ್ತಿದೆ. ಕಳೆದ 6 ತಿಂಗಳಿನಿಂದ ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ಆಗಿದೆ ಗೊತ್ತಿದೆ. ಯಾರೆಲ್ಲ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಅವರನ್ನೆಲ್ಲ ಯಾವಾಗ ಪಕ್ಷದಿಂದ ಹೊರ ಹಾಕುತ್ತೀರಾ ಎಂದು ಪ್ರಶ್ನಿಸಿದರು.

ಅಂತೆಯೇ ಸೂಕ್ತ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ. ಆದಷ್ಟು ಬೇಗ ಎಲ್ಲವನ್ನೂ ನಿಮ್ಮ ಮುಂದೆ ಹೇಳುತ್ತೇನೆ ಎಂದರು.

ST Somashekhar
ರಾಮನ ಹೆಸರಲ್ಲಿ ರಾಜಕೀಯ ಮಾಡಿದ್ದಾರಷ್ಟೆ; ಕುಮಾರಸ್ವಾಮಿ ಕನ್ನಡಿಗರ ₹5 ಲಕ್ಷ ಕೋಟಿ ಹಣ ತಂದರೆ ಚಿನ್ನದ ತಗಡನ್ನೇ ಹಾಕಿಸೋಣ: ಡಿ.ಕೆ ಸುರೇಶ್

ಕಾಂಗ್ರೆಸ್ ಗೆ ಸೇರಿಸ್ಕೊಳ್ಳಲ್ಲ: ಈಶ್ವರ್ ಖಂಡ್ರೆ!

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ್ ಖಂಡ್ರೆ ಬಿಜೆಪಿ ಉಚ್ಛಾಟಿತ ನಾಯಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಬ್ಬರೂ ನಾಯಕರು ಹಿಂದೆ ಕಾಂಗ್ರೆಸ್ ನಲ್ಲಿದ್ದವರೇ.. ಆದರೆ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com